ಬಿಜೆಪಿ ಶಾಸಕನ ಮೃಗೀಯ ಹಲ್ಲೆಗೆ ಕಾಲು ಕಳೆದುಕೊಂಡ ಪೊಲೀಸ್ ಕುದುರೆ

ಡೆಹ್ರಾಡೂನ್, ಮಾ. 14 : ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಷಿ ಪೊಲೀಸ್ ಕುದುರೆಯೊಂದಕ್ಕೆ ಲಾಟಿಯಿಂದ ಬರ್ಬರವಾಗಿ ಹಲ್ಲೆ ನಡೆಸುವ ಆಘಾತಕಾರಿ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಕುದುರೆಯನ್ನು ಅಲ್ಲಿ ನಿಲ್ಲಿಸಲಾಗಿತ್ತು. ಆದರೆ ಜೋಷಿ ಇದ್ದಕ್ಕಿದ್ದಂತೆ ಉದ್ರಿಕ್ತರಾಗಿ ಕುದುರೆಗೆ ಲಾಟಿಯಿಂದ ಹೊಡೆಯಲಾರಂಭಿಸಿದರು. ಇದನ್ನು ಕಂಡ ಅವರ ಬೆಂಬಲಿಗರೂ ಕುದುರೆಗೆ ಹೊಡೆದರು. ಇದರಿಂದ ತೀವ್ರ ಗಾಯಕ್ಕೊಳಗಾದ ಕುದುರೆಯನ್ನು ಇಲ್ಲಿನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ ಎಸ್ ಪಿ ತಿಳಿಸಿದ್ದಾರೆ.
" ವೈದ್ಯರ ಪ್ರಕಾರ ಕುದುರೆಯ ಕಾಲನ್ನು ಕತ್ತರಿಸಬೇಕಾಗುತ್ತದೆ. ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಜೋಷಿ ಮಾತ್ರ " ನಾನೇನೂ ತಪ್ಪು ಮಾಡಿಲ್ಲ. ಅದಕ್ಕೆ ಬಾಯಾರಿಕೆ ಆಗಿತ್ತು. ನೀರು ಕೊಟ್ಟ ಕೂಡಲೇ ಅದು ಸರಿಯಾಯಿತು " ಎಂದು ಹೇಳಿದ್ದಾರೆ.
" ಒಂದು ಪಶುವಿನ ಮೇಲೆ ಲಾಟಿ ಬಳಸುತ್ತೀರಾ ? ಸಹಿಷ್ಣುತೆ ಎಂಬುದು ಬಿಜೆಪಿಯ ದಿಕ್ಷನರಿಯಲ್ಲೇ ಇಲ್ಲದಂತೆ ಕಾಣುತ್ತದೆ " ಎಂದು ರಾಜ್ಯದ ಮುಖ್ಯಮಂತ್ರಿ ಹರೀಶ್ ರಾವತ್ ಪ್ರತಿಕ್ರಿಯಿಸಿದ್ದಾರೆ.

courtesy : Indian Express







