ಕೊಣಾಜೆ: ರಸ್ತೆಯಲ್ಲೇ ಅಪಾಯಕಾರಿ ವಿದ್ಯುತ್ ಕಂಬ...! ,ವಿದ್ಯುತ್ ಕಂಬಕ್ಕೆ ವ್ಯವಸ್ಥೆ ಕಲ್ಪಿಸದೆ ಡಾಂಬಾರಿಕರಣ: ಆಕ್ರೋಶ

ವಿದ್ಯುತ್ ಕಂಬದ ಸುತ್ತ ಡಾಂಬಾರಿಕರಣ ನಡೆಸುತ್ತಿರುವುದು
ಕೊಣಾಜೆ: ತೊಕ್ಕೊಟ್ಟು-ಮುಡಿಪು ರಸ್ತೆಯ ಅಗಲೀಕರಣ ಕಾಮಗಾರಿ ಭರದಿಂದ ನಡೆದು ಬಹುತೇಕ ಪೂರ್ಣಗೊಂಡಿದೆ, ಆದರೆ ಕೊಣಾಜೆ ಸಮೀಪದ ನಡುಪದವು ಕ್ರಾಸ್ ಬಳಿ ರಸ್ತೆ ಅಗಲೀಕರಣದ ವೇಳೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಈಗ ರಸ್ತೆ ಮದ್ಯೆಯೇ ಉಳಿದುಕೊಂಡಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬವನ್ನು ಬದಲಿ ವ್ಯವಸ್ಥೆ ಕಲ್ಪಿಸಲು ಇನ್ನೂ ಕೂಡಾ ಇಲಾಖೆ ಮುಂದಾಗದೆ ನಿರ್ಲಕ್ಷವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವಾರು ತಿಂಗಳಿಂದ ಹಂತ ಹಂತವಾಗಿ ತೊಕ್ಕೊಟ್ಟುವಿನಿಂದ ಮುಡಿಪು ರಸ್ತೆಯ ಅಗಲೀಕರಣ ಕಾವಗಾರಿ ನಡೆಯುತ್ತಿದೆ. ತೊಕ್ಕೊಟ್ಟುವಿನಿಂದ ಮುಡಿಪುವರೆಗೆ ಹಲವಾರು ಶಿಕ್ಷಣ ಸಂಸ್ಥೆಗಳು, ಪ್ರತಿಷ್ಠಿತ ಕಂಪೆನಿಗಳು ನೆಲೆ ನಿಂತಿರುವುದರಿಂದ ಕಳೆದ ಹಲವು ವರ್ಷದ ಹಿಂದೆಯೇ ಇಲ್ಲಿಯ ರಸ್ತೆಯಲ್ಲಿ ವಾಹನ ದಟ್ಟನೆ ಅಧಿಕಗೊಂಡು ಸಂಚಾರಕ್ಕೆ ಬಹಳಷ್ಟು ಪರಿತಪಿಸುವಂತಾಗಿತ್ತು. ಆದರೆ ಇದೀಗ ರಸ್ತೆ ಸಾಕಷ್ಟು ಅಗಲೀಕರಣ ಕಾಮಗಾರಿ ನಡೆದಿರುವುದು ಈ ಭಾಗದ ಜನರಲ್ಲಿ ಹಾಗೂ ವಾಹನ ಸವಾರರಿಗೆ ಬಹಳಷ್ಟು ಅನುಕೂಲವನ್ನು ತಂದುಕೊಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಂತು ಸಂತಸ ತಂದಿದೆ ನಿಜ. ಆದರೆ ರಸ್ತೆ ಅಗಲೀಕರಣದ ವೇಳೆ ಮುಡಿಪು ಕೊಣಾಜೆ ಭಾಗದಲ್ಲಿ ಕೆಲವೊಂದು ವಿದ್ಯುತ್ ಕಂಬಗಳು ರಸ್ತೆಯ ಸಮೀಪವೇ ಉಳಿದುಕೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅದರಲ್ಲೂ ಕೊಣಾಜೆ ನಡುಪದವು ಕ್ರಾಸ್ ಬಳಿಯ ಬಸ್ ನಿಲ್ದಾಣದ ಬಳಿಯ ವಿದ್ಯುತ್ ಕಂಬವೊಂದು ರಸ್ತೆಯ ಮದ್ಯೆಯೇ ಇದ್ದು ಇಲ್ಲಿ ವಾಹನ ಸವಾರರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ರಸ್ತೆ ಅಗಲೀಕರಣ ಮತ್ತು ಡಾಂಬಾರಿಕರಣದ ವೇಳೆ ತೊಕ್ಕೊಟ್ಟುವಿನಿಂದ ಮುಡಿಪುವರೆಗೆ ಇರುವ ಪ್ರಮುಖ ಬಸ್ ತಂಗುದಾಣದ ಪ್ರದೇಶದಲ್ಲಿ ಪ್ರಯಾಣಿಕರಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಡಾಂಬಾರು ರಸ್ತೆಯನ್ನು ವಿಸ್ತರಿಸಿ ಡಾಂಬಾರು ಹಾಕಲಾಗಿದೆ. ಅದೇ ರೀತಿ ನಡುಪದವು ಕ್ರಾಸ್ ಬಸ್ ನಿಲ್ದಾಣದ ಬಳಿಯೂ ರಸ್ತೆಯನ್ನು ವಿಸ್ತರಿಸಿದಾಗ ಇಲ್ಲಿ ವಿದ್ಯುತ್ ಕಂಬದ ಸಮಸ್ಯೆ ಎದುರಾಗಿದೆ. ಆದರೆ ಕಾರ್ಮಿಕರು ಈ ಕಂಬವನ್ನು ಅಲ್ಲೇ ಉಳಿಸಿಕೊಂಡು ಅದರ ಸುತ್ತ ಡಾಂಬಾರಿಕರಣವನ್ನು ನಡೆಸಿದ್ದಾರೆ. ಇದೀಗ ಈ ಪ್ರದೇಶದಲ್ಲಿ ಕಾಮಗಾರಿ ನಡೆದು ಮೂರ್ನಾಲ್ಕು ದಿನವಾಗುತ್ತಾ ಬಂದರೂ ಈ ವಿದ್ಯುತ್ ಕಂಬಕ್ಕೆ ಬದಲಿ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಗೆ ಪಿಡಬ್ಲ್ಯುಡಿ ಅಥಬಾ ಮೆಸ್ಕಾಂ ಇಲಾಖೆಯಾಗಲೀ ಮುಂದೆ ಬರದೆ ನಿರ್ಲಕ್ಷ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ನೂರಾರು ಜನ ಬಸ್ ನಿಲ್ದಾಣದ ಬಳಿ ಬಸ್ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಕಂಬಕ್ಕೆ ವಾಹನ ಡಿಕ್ಕಿ ಹೊಡೆದು ಅವಘಡ ಸಂಭವಿಸುವ ಮೊದಲು ಮೆಸ್ಕಾಂ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.





