ಮಾ.18ರಿಂದ ವಿಧಾನಸೌಧ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಬೆಂಗಳೂರು, ಮಾ.14: ರಾಜ್ಯ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾ.18ರಿಂದ 31ವರೆಗೆ ವಿಧಾನಸೌಧ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಆಯುಕ್ತ ಎನ್.ಎಸ್.ಮೇಘರಿಕ್ ಹೇಳಿದ್ದಾರೆ.
ಅಧಿವೇಶನದ ಕಾರ್ಯ ಕಲಾಪಗಳಿಗೆ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ನೆಮ್ಮದಿ ಕಾಪಾಡುವ ಹಿನ್ನೆಲೆಯಲ್ಲಿ ವಿಧಾನಸೌಧದ ಎರಡು ಕಿ.ಮೀಟರ್ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು, ಮೆರವಣಿಗೆ ಮತ್ತು ಸಭೆ ಏರ್ಪಡಿಸುವ ಪ್ರಕ್ರಿಯೆಗಳಿಗೆ ತಡೆ ಹಾಕಲಾಗಿದೆ.
ವ್ಯಕ್ತಿಗಳ ಶವಗಳ ಪ್ರತಿಕೃತಿ ಪ್ರದರ್ಶಿಸಿ ದಹನ ಮಾಡುವುದು ಹಾಗೂ ಪ್ರಚೋದಿತ ಬಹಿರಂಗ ಘೋಷಣೆ ಕೂಗುವುದು, ಮಾರಾಕಾಸ್ತ್ರ, ಕಲ್ಲುಗಳ ಶೇಖರಣೆ ಸೇರಿದಂತೆ ಇನ್ನಿತರೆ ಸಾರ್ವಜನಿಕರ ಹಿತಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ, ಅಧಿವೇಶನ ನಡೆಯದ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





