ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಸಂಸದೀಯ ಶಾಲೆ ಸ್ಥಾಪಿಸಲಿ: ರವಿವರ್ಮ ಕುಮಾರ್
‘ಶಾಂತವೇರಿ ಗೋಪಾಲಗೌಡ ಒಂದು ನೆನಪು’ ಕಾರ್ಯಕ್ರಮ

ಬೆಂಗಳೂರು, ಮಾ.14: ರಾಜ್ಯ ಸರಕಾರ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಸಂಸದೀಯ ಶಾಲೆಯನ್ನು ಸ್ಥಾಪಿಸಿ, ಜನಪ್ರತಿನಿಧಿಗಳಿಗೆ ರಾಜಕೀಯ ತರಬೇತಿ ನೀಡಬೇಕು ಎಂದು ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದ್ದಾರೆ.
ಸೋಮವಾರ ಕನ್ನಡ ಜನಶಕ್ತಿ ಕೇಂದ್ರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಶಾಂತವೇರಿ ಗೋಪಾಲಗೌಡ ಒಂದು ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ರಾಜಕಿಯ ವ್ಯವಸ್ಥೆ ವೌಲ್ಯಗಳನ್ನು ಕಳೆದುಕೊಂದು ಅಧಃಪತನಕ್ಕೆ ತಲುಪಿದೆ. ಜನ ಪ್ರತಿನಿಧಿಗಳಿಗೆ ರಾಜಕಿಯ ಜ್ಞಾನ ಇಲ್ಲದಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಹೀಗಾಗಿ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡ ಹಾಗೂ ಲೋಹಿಯಾ ಹೆಸರಿನಲ್ಲಿ ಸಂಸದೀಯ ಶಾಲೆಯನ್ನು ಸ್ಥಾಪಿಸುವುದು ತೀರ ಅಗತ್ಯವಿದೆ ಎಂದು ಅವರು ತಿಳಿಸಿದರು.
ರಾಜ್ಯದ ಜನತೆಗೆ ಸಮಾಜವಾದದ ಕುರಿತು ಚಿಂತನೆ ಮೂಡಿಸಿ, ಭೂ ಸುಧಾರಣೆ ತರುವಲ್ಲಿ ಶಾಂತವೇರಿ ಗೋಪಾಲಗೌಡರ ಪರಿಶ್ರಮ ಅಪಾರವಾಗಿದೆ. ಆದರೆ ಟಿವಿ ಧಾರಾವಾಹಿಗಳಿಗೆ, ಕೊಳ್ಳುಬಾಕ ಸಂಸ್ಕೃತಿಗೆ ದಾಸರಾಗಿರುವ ಜನತೆ ಸಮಾಜವಾದದ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ನಟರಾಜ್ ಹುಳಿಯಾರ್ ಮಾತನಾಡಿ, ಸಮಾಜವಾದಿ ಗೋಪಾಲಗೌಡರ ಬದುಕನ್ನು ತಿಳಿಯುವುದಕ್ಕಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ತಿರುಗಾಡಿದ್ದೇನೆ. ಈ ಸಂದರ್ಭದಲ್ಲಿ ನೂರಾರು ವ್ಯಕ್ತಿಗಳನ್ನು ಸಂಧಿಸಿದ್ದೇನೆ. ಈ ವೇಳೆ ಒಬ್ಬ ವ್ಯಕ್ತಿ ಸಹ ಗೋಪಾಲ ಗೌಡರ ಕುರಿತು ಕೆಟ್ಟದಾಗಿ ಮಾತನಾಡಿಲ್ಲ. ಇದು ಅವರ ಬದುಕಿದ ಪರಿ ಎಂದು ಸ್ಮರಿಸಿದರು.
ಇಂದು ಶಾಸನ ಸಭೆಗಳಲ್ಲಿ ಕಾಲಹರಣದ ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಶಾಸನ ಸಭೆಗೂ ಮುನ್ನ ವಿಧಾನಸೌಧದ ಗ್ರಂಥಾಲಯಕ್ಕೆ ಹೋಗಿ ಗೋಪಾಲಗೌಡರು ಸದನದಲ್ಲಿ ಮಾತನಾಡಿದ ಭಾಷಣಗಳನ್ನು ಓದಿ ಬಂದರೆ, ಶಾಸನ ಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳಾಗುತ್ತವೆ ಎಂದು ಅವರು ಆಶಿಸಿದರು. ಅಧ್ಯಕ್ಷತೆಯನ್ನು ಚಂದ್ರಶೇಖರ ಪಾಟೀಲ್ ವಹಿಸಿದ್ದರು.





