ಸಂಸತ್ ನೀತಿ ಸಮಿತಿಯಿಂದ ರಾಹುಲ್‌ಗೆ ಶೋಕಾಸ್ ನೋಟಿಸ್!
ಬ್ರಿಟಿಷ್ ಪೌರತ್ವ ವಿವಾದ
ಹೊಸದಿಲ್ಲಿ ಮಾ.14: ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿಯವರು ಇಂಗ್ಲೆಂಡಿನಲ್ಲಿದ್ದ ವೇಳೆ ಅಲ್ಲಿನ ಕಂಪೆನಿಯೊಂದರ ದಾಖಲೆಯಲ್ಲಿ ತಮ್ಮನ್ನು ಬ್ರಿಟಿಷ್ ಪ್ರಜೆಯೆಂದು ಘೋಷಿಸಿದ್ದಾರೆಯೇ ಎಂದು ಪ್ರಶ್ನಿಸಿ ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ನೇತೃತ್ವದ ಸಂಸದೀಯ ನೀತಿ ಸಮಿತಿಯು ಅವರಿಗೆ ಸೋಮವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆಯೆಂದು ಸಮಿತಿಯ ಸದಸ್ಯ ಅರ್ಜುನ್ ರಾವ್ ಮೇಘ್ವಾಲ್ ಮಾಹಿತಿ ನೀಡಿದ್ದಾರೆ.
ಆದರೆ ಕಾಂಗ್ರೆಸ್ ತನ್ನ ಉಪಾಧ್ಯಕ್ಷನಿಗೆ ಇಂತಹ ಯಾವುದೇ ನೋಟಿಸ್ ಸಿಕ್ಕಿಲ್ಲವೆಂದು ಹೇಳಿದೆಯೆಂದು ಸಿಎನ್‌ಎನ್-ಐಬಿಎನ್ ವರದಿಯೊಂದು ಹೇಳಿದರೆ ದಿ ಇಕನಾಮಿಕ್ ಟೈಮ್ಸ್ ಪ್ರಕಾರ ನೊಟೀಸನ್ನು ಕಳೆದ ವಾರವೇ ರಾಹುಲ್ ಕಚೇರಿಗೆ ತಲುಪಿಸಲಾಗಿದೆ.
ಜನವರಿ ತಿಂಗಳಲ್ಲಿ ಬಿಜೆಪಿಯ ದಿಲ್ಲಿ ಸಂಸದ ಮಹೇಶ್ ಗಿರ್ರಿ ಲೋಕಸಬಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರವೊಂದನ್ನು ಬರೆದು ಸಂಸದೀಯ ನೀತಿ ಸಮಿತಿಯು ಮೇಲಿನ ವಿಚಾರವನ್ನು ಆದ್ಯತೆಯ ಮೇರೆಗೆ ಯಾವುದೇ ಪೂರ್ವಾಗ್ರಹವಿಲ್ಲದೆ ತನಿಖೆ ನಡೆಸಬೇಕೆಂದು ವಿನಂತಿಸಿದ್ದರಲ್ಲದೆ ‘ಯಾವುದೇ ವ್ಯಕ್ತಿ ಸಂವಿಧಾನಕ್ಕಿಂತ ಮೇಲಲ್ಲ’ವೆಂದು ಹೇಳಿದ್ದರು. ರಾಹುಲ್ ಅವರು ಎರಡು ದೇಶಗಳ ಪೌರತ್ವವನ್ನು ಹೊಂದಿದ್ದಾರೆಂದು ಗಿರ್ರಿ ಆರೋಪಿಸಿದ್ದರು. ‘‘ರಾಹುಲ್ ವಿರುದ್ಧ ಹಲವು ವೈರುಧ್ಯಗಳು ಗಮನಕ್ಕೆ ಬಂದಿವೆ. ಅವರ ಪೌರತ್ವದ ಬಗ್ಗೆ ರಹಸ್ಯ ಅಡಗಿದೆ. ಅವರು ಎರಡು ದೇಶಗಳ ಪೌರತ್ವ ಹೊಂದಿದರೆ ಅದು ಗಂಭೀರ ವಿಚಾರ’’ ಎಂದು ಗಿರ್ರಿ ಹೇಳಿದ್ದು ಈ ಬಗ್ಗೆ ಇರುವ ಸಂದೇಹಗಳನ್ನು ನಿವಾರಿಸುವ ಅಗತ್ಯವಿದೆೞೞಎಂದು ಹೇಳಿದ್ದರು.
ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಕೂಡ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರವೊಂದರಲ್ಲಿ ರಾಹುಲ್ ಇಂಗ್ಲೆಂಡಿನಲ್ಲಿ ಕಂಪೆನಿಯೊಂದನ್ನು ಆರಂಭಿಸಲು ತಮ್ಮನ್ನು ಬ್ರಿಟಿಷ್ ಪ್ರಜೆ ಯೆಂದು ಘೋಷಿಸಿಕೊಂಡಿದ್ದಾರೆಂದು ಆರೋಪಿಸಿ ದ್ದರಲ್ಲದೆ ಅವರ ಭಾರತದ ಪೌರತ್ವವನ್ನು ರದ್ದುಗೊಳಿಸಬೇಕೆಂದೂ ಆಗ್ರಹಿಸಿದ್ದರು. ಕಾಂಗ್ರೆಸ್ ಸ್ವಾಮಿಯ ಆರೋಪವನ್ನು ಅಲ್ಲಗಳೆದಿದೆ.





