ಮೊದಲ ಪಂದ್ಯದಲ್ಲಿ ಭಾರತ-ಕಿವೀಸ್ ಮುಖಾಮುಖಿ

ಇಂದಿನಿಂದ ವಿಶ್ವಕಪ್‌ನ ಸೂಪರ್-10 ಪಂದ್ಯಗಳ ಆರಂಭ
ನಾಗ್ಪುರ, ಮಾ.14: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ರವಿವಾರ ಕೊನೆಗೊಂಡಿದ್ದು, ಮಂಗಳವಾರ ಆತಿಥೇಯ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ವಿಶ್ವಕಪ್‌ನ ಸೂಪರ್-10 ಪಂದ್ಯಗಳು ಆರಂಭವಾಗಲಿವೆ. ಸೂಪರ್-10 ಸುತ್ತಿನಲ್ಲಿ 10 ತಂಡಗಳ ನಡುವೆ ತೀವ್ರ ಹೋರಾಟವನ್ನು ನಿರೀಕ್ಷಿಸಲಾಗುತ್ತಿದೆ.
‘ಪ್ರಶಸ್ತಿ ಫೇವರಿಟ್’ ಭಾರತ ಈ ವರ್ಷ 11 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಪೈಕಿ 10ರಲ್ಲಿ ಜಯ ಸಾಧಿಸಿದೆ. ನ್ಯೂಝಿಲೆಂಡ್ 5 ಪಂದ್ಯಗಳನ್ನು ಆಡಿದ್ದು 4ರಲ್ಲಿ ಜಯ ಸಾಧಿಸಿದೆ. 2007ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿರುವ ಟೀಮ್ ಇಂಡಿಯಾ ಈ ಬಾರಿ ತವರು ನೆಲದಲ್ಲಿ 2ನೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ನ್ಯೂಝಿಲೆಂಡ್ ತಂಡ ಕಳೆದ ಕೆಲವು ವರ್ಷಗಳಿಂದ ಸೀಮಿತ ಓವರ್‌ಗಳಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದೆ. ಸ್ಫೋಟಕ ದಾಂಡಿಗ ಬ್ರೆಂಡನ್ ಮೆಕಲಮ್ ನಿವೃತ್ತಿಯಿಂದಾಗಿ ಕಿವೀಸ್‌ನ ಆರಂಭಿಕ ಆಟಗಾರನ ಸ್ಥಾನ ತೆರವಾಗಿದೆ. 2015ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್ ತಂಡವನ್ನು ನಾಯಕನಾಗಿ ಫೈನಲ್‌ಗೆ ತಲುಪಿಸಿದ್ದ ಮೆಕಲಮ್ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಮೆಕಲಮ್‌ರಿಂದ ತೆರವಾಗಿರುವ ಆರಂಭಿಕ ಆಟಗಾರನ ಸ್ಥಾನವನ್ನು ಕೇನ್ ವಿಲಿಯಮ್ಸನ್ ತುಂಬುವ ಸಾಧ್ಯತೆಯಿದೆ.
ಭಾರತ ತಂಡ ಕಿವೀಸ್ ವಿರುದ್ಧ ಈ ವರೆಗೆ 4 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು ಒಂದರಲ್ಲೂ ಜಯ ಸಾಧಿಸಿಲ್ಲ. 2007ರ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಜಯಿಸಿದ್ದರೂ ಕಿವೀಸ್ ವಿರುದ್ಧದ ಗ್ರೂಪ್ ಪಂದ್ಯವನ್ನು ಸೋತಿತ್ತು.
ಸಾಮಾನ್ಯವಾಗಿ ಸ್ವದೇಶದಲ್ಲಿ ಎಲ್ಲ ತಂಡಗಳಿಗೆ ಸವಾಲಾಗುವ ಧೋನಿ ಪಡೆ ಕಿವೀಸ್ ವಿರುದ್ಧದ ಸೋಲಿಗೆ ಮಂಗಳ ಹಾಡಲಿದೆಯೇ ಎಂದು ನೋಡಬೇಕಾಗಿದೆ. ಭಾರತ ಪ್ರಸ್ತುತ ಶ್ರೇಷ್ಠ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯದ ವಿರುದ್ಧ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ, ಸ್ವದೇಶದಲ್ಲಿ ಶ್ರೀಲಂಕಾದ ವಿರುದ್ಧ 2-1 ಅಂತರದಿಂದ ಗೆದ್ದುಕೊಂಡಿತ್ತು. ಇತ್ತೀಚೆಗೆ ಟ್ವೆಂಟಿ-20 ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು.
ಅಗ್ರ ಕ್ರಮಾಂಕದ ದಾಂಡಿಗ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಕಳೆದ 7 ಇನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧಶತಕ ಬಾರಿಸಿದ್ದಾರೆ. 38 ಪಂದ್ಯಗಳಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ 1,369 ರನ್ ಗಳಿಸಿರುವ ಕೊಹ್ಲಿ ವಿಶ್ವದ ಯಾವುದೇ ಬೌಲರ್‌ಗಳ ಬೆವರಿಳಿಸಬಲ್ಲರು.
ಸದ್ಯ ಶ್ರೇಷ್ಠ ಫಾರ್ಮ್‌ನಲ್ಲಿರುವ ಆರಂಭಿಕ ದಾಂಡಿಗ ರೋಹಿತ್ ಶರ್ಮ ಆರನೆ ಬಾರಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯುವ ಬೌಲರ್ ಜಸ್‌ಪ್ರೀತ್ ಬುಮ್ರಾ ಹೊಸ ಚೆಂಡಿನಲ್ಲಿ ಹಾಗೂ ಡೆತ್ ಓವರ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಅನುಭವಿ ಆಶೀಷ್ ನೆಹ್ರಾ ಹಾಗೂ ಮಧ್ಯಮ ವೇಗದ ಬೌಲರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ಸ್ಪಿನ್ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಪ್ರಮುಖ ಬೌಲರ್‌ಗಳಾಗಿದ್ದು, ಹರ್ಭಜನ್ ಸಿಂಗ್ ಹಾಗೂ ಪವನ್ ನೇಗಿ ನಡುವೆ ಮೂರನೆ ಸ್ಪಿನ್ನರ್ ಸ್ಥಾನಕ್ಕೆ ಸ್ಪರ್ಧೆಯಿದೆ.
ವಿಲಿಯಮ್ಸನ್ ನೇತೃತ್ವದ ಕಿವೀಸ್ ತಂಡದಲ್ಲಿ ಸ್ಪೋಟಕ ದಾಂಡಿಗ ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಗ್ರಾಂಟ್ ಎಲಿಯಟ್, ರಾಸ್ ಟೇಲರ್ ಹಾಗೂ ಕೋರಿ ಆ್ಯಂಡರ್ಸನ್ ಅವರಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಭಾರತ, ಕಿವೀಸ್‌ಗೆ ಮಿಶ್ರ ಫಲ: ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಿರುವ ಭಾರತ ಹಾಗೂ ಕಿವೀಸ್ ತಲಾ 1ರಲ್ಲಿ ಜಯ ಹಾಗೂ ಸೋಲು ಕಂಡಿವೆ.
ಕೋಲ್ಕತಾದಲ್ಲಿ ನಡೆದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್‌ನ್ನು 45 ಅಂತರದಿಂದ ಮಣಿಸಿತ್ತು. ಆದರೆ, ಮುಂಬೈನಲ್ಲಿ ನಡೆದಿದ್ದ ಎರಡನೆ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 3 ರನ್ ಅಂತರದಿಂದ ಸೋತಿತ್ತು.
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ಔಟಾಗದೆ ಬಾರಿಸಿದ 98 ರನ್ ನೆರವಿನಿಂದ ಭಾರತ 6ಕ್ಕೆ 185 ರನ್ ಗಳಿಸಿತ್ತು. ಏಳು ಬೌಲರ್‌ಗಳ ಪೈಕಿ ನಾಲ್ವರು ತಲಾ 2 ವಿಕೆಟ್ ಕಬಳಿಸಿದ್ದರು. ದಕ್ಷಿಣ ಆಫ್ರಿಕ ವಿರುದ್ಧದ 2ನೆ ಅಭ್ಯಾಸ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಜೆಪಿ ಡುಮಿನಿ ಅರ್ಧಶತಕ ಬಾರಿಸುವ ಮೂಲಕ ಆಫ್ರಿಕ 8 ವಿಕೆಟ್‌ಗೆ 196 ರನ್ ಗಳಿಸಲು ನೆರವಾಗಿದ್ದರು. ಶಿಖರ್ ಧವನ್ 73 ರನ್ ಗಳಿಸಿದ ಹೊರತಾಗಿಯೂ ಭಾರತ ತಂಡಕ್ಕೆ 193 ರನ್ ಗಳಿಸಿತ್ತು.
ಮತ್ತೊಂದೆಡೆ, ನ್ಯೂಝಿಲೆಂಡ್ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 74 ರನ್‌ನಿಂದ ಗೆಲುವು ಸಾಧಿಸಿತ್ತು. ಆದರೆ, ಇಂಗ್ಲೆಂಡ್‌ನ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಸೋತಿತ್ತು.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕಿವೀಸ್: ಕಳೆದ ವರ್ಷ 50 ಓವರ್ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದ್ದ ಕಿವೀಸ್ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಈ ತನಕ ಗಮನಾರ್ಹ ಪ್ರದರ್ಶನ ನೀಡಿಲ್ಲ. 2007ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದು, ಕಿವೀಸ್‌ನ ಈವರೆಗಿನ ಶ್ರೇಷ್ಠ ಸಾಧನೆ. ಆ ನಂತರ ನಡೆದ ವಿಶ್ವಕಪ್‌ನಲ್ಲಿ ಗ್ರೂಪ್ ಹಂತ ದಾಟಲೂ ವಿಫಲವಾಗಿತ್ತು. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಟ್ಟು 25 ಪಂದ್ಯಗಳನ್ನು ಆಡಿರುವ ಕಿವೀಸ್ ಕೇವಲ 11 ಪಂದ್ಯಗಳನ್ನು ಗೆದ್ದುಕೊಂಡಿದೆ.
ಅಂಕಿ-ಅಂಶ:
* ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್‌ನ್ನು ಈ ತನಕ ಸೋಲಿಸಿಲ್ಲ. *ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಗರಿಷ್ಠ ಸ್ಕೋರರ್ ಆಗಿದ್ದಾರೆ.(4 ಇನಿಂಗ್ಸ್, 90 ರನ್)
* ಕಿವೀಸ್‌ನ ಈಗಿನ ತಂಡದಲ್ಲಿ ಇಬ್ಬರು ಬೌಲರ್‌ಗಳು ಭಾರತದ ವಿರುದ್ಧದ ಟ್ವೆಂಟಿ-20ಯಲ್ಲಿ ವಿಕೆಟ್ ಪಡೆದಿದ್ದಾರೆ. ಅವರುಗಳೆಂದರೆ: ಟಿಮ್ ಸೌಥಿ(2) ಹಾಗೂ ನಥನ್ ಮೆಕಲಮ್(1).
ಮೈದಾನದ ಸ್ಥಿತಿ-ಗತಿ
ನಾಗ್ಪುರದ ಹೊರ ವಲಯದಲ್ಲಿರುವ ಜಮ್ತಾ ಸ್ಟೇಡಿಯಂ ಸ್ಪಿನ್ನರ್‌ಗಳ ಸ್ನೇಹಿ ಪಿಚ್ ಎಂಬ ಖ್ಯಾತಿ ಪಡೆದಿದೆ. ಆದರೆ, ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಇದೇ ಮೈದಾನದಲ್ಲಿ 186, 170 ಹಾಗೂ 158 ರನ್ ದಾಖಲಾಗಿತ್ತು. ಈ ಪಂದ್ಯಗಳಲ್ಲಿ ಸ್ಪಿನ್ನರ್‌ಗಳ ಕೈಚಳಕ ತೋರಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ಗೆ ಮೊದಲು ನಾಗ್ಪುರ ಸ್ಟೇಡಿಯಂ ಕೇವಲ ಒಂದು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯವಹಿಸಿತ್ತು. 2009ರಲ್ಲಿ ಭಾರತ ಹಾಗೂ ಶ್ರೀಲಂಕಾ ಇಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 9 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು.
ಭಾರತ(ಸಂಭಾವ್ಯ): ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ(ನಾಯಕ/ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್, ಆಶೀಷ್ ನೆಹ್ರಾ ಹಾಗೂ ಜಸ್‌ಪ್ರೀತ್ ಬುಮ್ರಾ.
ನ್ಯೂಝಿಲೆಂಡ್(ಸಂಭಾವ್ಯ): ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್(ನಾಯಕ), ಕಾಲಿನ್ ಮುನ್ರೊ, ಕೋರಿ ಆ್ಯಂಡರ್ಸನ್, ರಾಸ್ ಟೇಲರ್, ಗ್ರಾಂಟ್ ಎಲಿಯಟ್, ಲೂಕ್ ರಾಂಚಿ, ಮಿಚೆಲ್ ಸ್ಯಾಂಟ್ನರ್, ನಥನ್ ಮೆಕಲಮ್/ಐಶ್ ಸೋಧಿ, ಆ್ಯಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್.
ಪಂದ್ಯದ ಸಮಯ: ರಾತ್ರಿ 7:30.








