ಪೊಲೀಸ್ ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕ..!

ಡೆಹ್ರಾಡೋನ್, ಮಾ.14 ಉತ್ತರಾಖಂಡ ಸರಕಾರದ ವಿರುದ್ಧ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರೊಬ್ಬರು ಲಾಠಿಯಿಂದ ಬಡಿದು ಪೊಲೀಸ್ ಕುದುರೆಯ ಕಾಲು ಮುರಿದ ಅಮಾನವೀಯ ಘಟನೆ ಇಂದು ನಡೆದಿದೆ.
ಮಸ್ಸೂರಿ ಕ್ಷೇತ್ರದ ಬಿಜೆಪಿ ಎಂಎಲ್‌ಎ ಗಣೇಶ್ ಜೋಶಿ ಮೂಕ ಪ್ರಾಣಿ ಕುದುರೆಯ ಕಾಲು ಮುರಿದು ಸರಕಾರದ ವಿರುದ್ಧ ತನ್ನ ಸಿಟ್ಟನ್ನು ತೋರ್ಪಡಿಸಿದ್ದಾರೆ. ಗಣೇಶ್ ಜೋಶಿ ಬೆತ್ತದಿಂದ ಕುದುರೆಯ ಕಾಲಿಗೆ ಬಡಿಯುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾದರು ಎಂದು ಹೇಳಲಾಗಿದೆ.
ಮುಖ್ಯ ಮಂತ್ರಿ ಹರೀಶ್ ರಾವತ್ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಧಾನ ಸೌಧಕ್ಕೆ ನುಗ್ಗಲು ಬಂದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಂಡದರು. ಅಹಿತಕರ ಘಟನೆಯನ್ನು ತಪ್ಪಿಸಲು ಸುಮಾರು ಮೂರು ಸಾವಿರಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಅಶ್ವಾರೋಹಿ ಪೊಲೀಸರ ಪಡೆ ಅಲ್ಲಿಗೆ ಆಗಮಿಸಿತ್ತು.
ಕಳೆದ ಏಳು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ ಶಕ್ತಿಮಾನ್ ಹೆಸರಿನ ಕುದುರೆಯ ಮೇಲೆ ಶಾಸಕ ಗಣೇಶ್ ಜೋಶಿ ಮತ್ತು ಕಾರ್ಯಕರ್ತರು ಹಲ್ಲೆ ನಡೆಸಿದ ಪರಿಣಾಮವಾಗಿ ಕುದುರೆಯ ಕಾಲು ಮುರಿದಿದ್ದು, ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಜೋಶಿ ಸೇರಿದಂತೆ ಹನ್ನೆರಡು ಮಂದಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 429 ಮತ್ತು 188ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿದೆ. ಆದರೆ ತಾನು ಕುದುರೆಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ಶಾಶಕ ಜೋಶಿ ಹೇಳಿದ್ದಾರೆ.








