ಅಫ್ರಿದಿ ಹೇಳಿಕೆ ನಾಚಿಕೆಗೇಡಿತನದ್ದು: ಜಾವೇದ್ ಮಿಯಾಂದಾದ್

ಕರಾಚಿ, ಮಾ.14: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗಿಂತ ಭಾರತದ ಅಭಿಮಾನಿಗಳು ಹೆಚ್ಚು ಪ್ರೀತಿ ನೀಡಿದ್ದಾರೆ ಎಂಬ ಶಾಹಿದ್ ಅಫ್ರಿದಿಯ ಹೇಳಿಕೆಗೆ ‘ಆಘಾತ’ ಹಾಗೂ ‘ನೋವು’ ವ್ಯಕ್ತಪಡಿಸಿರುವ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಆಟಗಾರರ ಇಂತಹ ಹೇಳಿಕೆ ನಾಚಿಕೆಗೇಡಿತನದ್ದು ಎಂದಿದ್ದಾರೆ.
‘‘ಇಂತಹ ಹೇಳಿಕೆ ನೀಡುವ ಆಟಗಾರರನಿಗೆ ನಾಚಿಕೆಯಾಗಬೇಕು. ಇದು ಅವರೇ ತಲೆ ತಗ್ಗಿಸುವಂತಹ ಹೇಳಿಕೆ. ನಮಗೆ ಭಾರತ ಏನು ನೀಡಿದೆ? ಎಂಬ ಸತ್ಯವನ್ನು ಭಾರತದಲ್ಲಿ ಹೇಳಬೇಕಾಗಿತ್ತು. ಕಳೆದ ಐದು ವರ್ಷಗಳಿಂದ ಭಾರತ, ಪಾಕಿಸ್ತಾನ ಕ್ರಿಕೆಟ್‌ಗೆ ಏನು ಕೊಡುಗೆ ನೀಡಿದೆ. ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ವರ್ಷ ಆಡಿರುವ ನನಗೆ ನಮ್ಮ ಆಟಗಾರರ ಇಂತಹ ಹೇಳಿಕೆ ಕೇಳಿ ಆಘಾತ ಉಂಟಾಗಿದೆ’’ಎಂದು ಮಿಯಾಂದಾದ್ ‘ಆಜ್ ಟಿವಿ‘ಗೆ ತಿಳಿಸಿದ್ದಾರೆ. ನಮಗೆ ಭಾರತದಲ್ಲಿ ಕ್ರಿಕೆಟ್ ಆಡುವುದೆಂದರೆ ತುಂಬಾ ಇಷ್ಟ. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗಿಂತ ಭಾರತದ ಅಭಿಮಾನಿಗಳ ನಮಗೆ ಹೆಚ್ಚು ಪ್ರೀತಿ-ಆದರಣೆ ತೋರುತ್ತಿದ್ದಾರೆ ಎಂದು ಅಫ್ರಿದಿ ರವಿವಾರ ಕೋಲ್ಕತಾದಲ್ಲಿ ಹೇಳಿಕೆ ನೀಡಿದ್ದರು.
‘‘ಪಿಸಿಬಿ ಆಟಗಾರರ ಇಂತಹ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನದಿಂದ ಹೊರಗೆ ಹೋದಾಗ ಮಾಧ್ಯಮಗಳ ಮುಂದೆ ಹೇಗೆ ಮಾತನಾಡಬೇಕೆಂದು ಅವರಿಗೆ ಕಲಿಸಬೇಕು. ಪಾಕ್ ಆಟಗಾರರು ಭಾರತದಲ್ಲಿ ಶ್ರೇಷ್ಠ ಪ್ರದರ್ಶನ ನೀಡಬೇಕೇ ಹೊರತು ಇಂತಹ ಅನಗತ್ಯ ಹೇಳಿಕೆ ನೀಡಬಾರದು’’ ಎಂದು ಪಾಕ್ ಪರ 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಿಯಾಂದಾದ್ ಹೇಳಿದ್ದಾರೆ





