ಬ್ರೆಝಿಲ್ ಅಧ್ಯಕ್ಷೆ ವಿರುದ್ಧ ಬೃಹತ್ ಪ್ರತಿಭಟನೆ
ಭ್ರಷ್ಟಾಚಾರ, ಆರ್ಥಿಕ ಕುಸಿತಕ್ಕೆ ಕಾರಣ: ಪ್ರತಿಭಟನಾಕಾರರ ಆರೋಪ

ಸಾವೊ ಪೌಲೊದಲ್ಲಿ ನಡೆದ ಪ್ರತಿಭಟನೆ
ಸಾವೊ ಪೌಲೊ (ಬ್ರೆಝಿಲ್), ಮಾ. 14: ಅಧ್ಯಕ್ಷೆ ಡಿಲ್ಮಾ ರೌಸಿಫ್ ಅಧಿಕಾರದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ 30 ಲಕ್ಷಕ್ಕೂ ಅಧಿಕ ಮಂದಿ ರವಿವಾರ ಬ್ರೆಝಿಲ್ನಲ್ಲಿ ಪ್ರದರ್ಶನ ನಡೆಸಿದರು.
ಬ್ರೆಝಿಲ್ನಾದ್ಯಂತ ರಾಷ್ಟ್ರ ಧ್ವಜಗಳನ್ನು ಹಿಡಿದುಕೊಂಡ ಜನರು ‘ಡಿಲ್ಮಾ ಔಟ್’ ಎಂಬ ಘೋಷಣೆಗಳನ್ನು ಕೂಗಿದರು.
ಡಿಲ್ಮಾ ಬೃಹತ್ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ ಹಾಗೂ 25 ವರ್ಷಗಳಲ್ಲೇ ಅತ್ಯಂತ ಭೀಕರ ಆರ್ಥಿಕ ಕುಸಿತಕ್ಕೆ ಕಾರಣ ಎಂಬ ಅಪವಾದವನ್ನು ಹೊತ್ತುಕೊಂಡಿದ್ದಾರೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷೆ ವಿರುದ್ಧದ ಛೀಮಾರಿ ಕಲಾಪವನ್ನು ತ್ವರಿತಗೊಳಿಸಬೇಕು ಎಂಬುದಾಗಿ ಪ್ರತಿಭಟನಾಕಾರರು ಸಂಸತ್ತಿನ ಮೇಲೆ ಒತ್ತಡ ಹೇರಿದ್ದಾರೆ.
‘‘ನಾವೀಗ ನಮ್ಮ ದೇಶದ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಈಗ ನಾವು ಬದಲಾವಣೆಯನ್ನು ತರಲು ಹೊರಟಿದ್ದೇವೆ’’ ಎಂದು ಸಾವೊ ಪೌಲೊದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದವರ ನಾಯಕ ರೊಜರಿಯೊ ಚೆಕರ್ ಹೇಳಿದರು.
ಪ್ರತಿಪಕ್ಷಗಳ ಭದ್ರ ನೆಲೆ ಸಾವೊ ಪೌಲೊದಲ್ಲಿ ನಡೆದ ಪ್ರತಿಭಟನೆಯಲ್ಲಿ ‘‘ಐತಿಹಾಸಿಕ’’ 14 ಲಕ್ಷ ಮಂದಿ ಪಾಲ್ಗೊಂಡರು ಎಂದು ಸರಕಾರಿ ಸೇನಾ ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಸಾವೊ ಪೌಲೊದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಸಂಖ್ಯೆ 5 ಲಕ್ಷ ಎಂದು ಸಂಶೋಧನಾ ಕೇಂದ್ರ ‘ಡಾಟಫೋಲ’ ಹೇಳಿದೆ. ಇದೂ ದಾಖಲೆಯೇ ಎಂದು ಅದು ತಿಳಿಸಿದೆ.





