ಇದು ಪತ್ರಿಕಾವೃತ್ತಿಗೆ ಬಗೆಯುವ ದ್ರೋಹವಲ್ಲವೇ?
ಮಾನ್ಯರೆ,
ಮಾತಿನಿಂ ನಗೆನುಡಿಯ ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವಸಂಪದವು
ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ
ಮದ್ರಾಸ್ ಐಐಟಿ, ಹೈದರಾಬಾದ್ ವಿವಿ, ಜವಾಹರ್‌ಲಾಲ್ ನೆಹರೂ ವಿವಿ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಹಲವಾರು ಅಹಿತಕರ ವಿದ್ಯಮಾನಗಳನ್ನು ಗಮನಿಸುವಾಗ ನಾವೆಲ್ಲರೂ ಶಾಲಾ ದಿನಗಳಲ್ಲಿ ಕಲಿತ ಸರ್ವಜ್ಞ ಕವಿಯ ಈ ವಚನವನ್ನು ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆ ಎಂದು ಅನಿಸಿತ್ತದೆ. ಅಷ್ಟು ಮಾತ್ರವಲ್ಲ ಅದನ್ನು ವಿಶೇಷವಾಗಿ ಈ ಹೊತ್ತಿನ ಕೆಲವೊಂದು ರಾಜಕಾರಣಿಗಳು ಹಾಗೂ ಮಾಧ್ಯಮ ಮಾಲಕರ ಗಮನಕ್ಕೂ ತರಬೇಕಾಗಿದೆ. ತಾವೇ ಸರ್ವಜ್ಞರೆಂಬಂತೆ ವರ್ತಿಸುವ: ತಮ್ಮ ಪಕ್ಷಪಾತೀಯ ನಿಲುವುಗಳು ಅಥವಾ ತಮ್ಮ ಪೋಷಕ ರಾಜಕಾರಣಿ/ಉದ್ಯಮಿಗಳ ಧೋರಣೆ, ಸಿದ್ಧಾಂತಗಳ ಪ್ರಚಾರಕರಾಗಿರುವ; ತಾವೇ ಸಮಾಜದ ಪ್ರತಿನಿಗಳೆಂದು ಬಿಂಬಿಸುತ್ತಿರುವ; ಚರ್ಚಾಗೋಷ್ಠಿಗಳನ್ನು ಅಣಕವಾಗಿಸುತ್ತಿರುವ ನಿರ್ಲಜ್ಜ ಆ್ಯಂಕರ್‌ಗಳಿಗೂ ತಿಳಿಹೇಳಬೇಕಾಗಿದೆ. ತಿರುಚಿಸಲ್ಪಟ್ಟ ಅಥವಾ ತಾವೇ ತಿರುಚಿದ ವೀಡಿಯೊ ಆಡಿಯೊಗಳನ್ನು ಪ್ರಮಾಣೀಕರಿಸದೆ ನೇರವಾಗಿ ಪ್ರದರ್ಶಿಸುವುದು ಪತ್ರಿಕಾವೃತ್ತಿಗೆ ಬಗೆಯುವ ದ್ರೋಹವಲ್ಲವೇ? ಎಂದು ಕೇಳಬೇಕಾಗಿದೆ. ದೃಢೀಕರಿಸದ ಸುಳ್ಳು ಅಥವಾ ಅರೆಸತ್ಯ ಸುದ್ದಿಗಳನ್ನು ಪ್ರಸಾರ ಮಾಡಿ ತಮ್ಮ ಜಿಹ್ವಾ ಪ್ರಾವೀಣ್ಯದಿಂದ ವೀಕ್ಷಕರ ಭಾವನೆೆಗಳನ್ನು ಕೆರಳಿಸುವ ಮೂಲಕ; ವಾಸ್ತು; ಜ್ಯೋತಿಷ್ಯಗಳಂತಹ ಅವೈಜ್ಞಾನಿಕ, ಅಸಾಂವಿಧಾನಿಕ ಆಚರಣೆಗಳನ್ನು ಪ್ರೋತ್ಸಾಹಿಸುವ ಮೂಲಕ ತಾವು ಸಮಾಜಕ್ಕೆ ಎಸಗುತ್ತಿರುವ ಗಂಭೀರ ಹಾನಿ ಏನೆಂದು ತಿಳೆಯದೇ ಎಂದು ಪ್ರಶ್ನಿಸಬೇಕಾಗಿದೆ. ನಿಯಂತ್ರಣ ಇಲ್ಲದ, ನೈತಿಕತೆ ಇಲ್ಲದ,ಪೂರ್ವಗ್ರಹಪೀಡಿತ ಮಾಧ್ಯಮ ಪ್ರಜಾತಾಂತ್ರಿಕ ವ್ಯವಸ್ಥೆಗೆ ವಿರುದ್ಧವೂ ಸರ್ವಾಕಾರಿ ವ್ಯವಸ್ಥೆಯ ಪರವೂ ಆಗಿರುತ್ತದೆ ಎಂಬುದರ ಕನಿಷ್ಠ ಅರಿವಾದರೂ ಇವರಿಗಿದೆಯೇ ಎಂದು ಕೇಳಬೇಕಾಗಿದೆ.
-ಸುರೇಶ್ ಭಟ್, ಮಂಗಳೂರು





