‘ಬಿಎಂಟಿಸಿ ನಿರ್ವಾಹಕನ ಮೇಲೆ ಟೋಲ್ ಸಿಬ್ಬಂದಿಯಿಂದ ಹಲ್ಲೆ’

ಹೊಸಕೋಟೆ, ಮಾ.14: ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ನಿರ್ವಾಹಕನ ಮೇಲೆ ಲ್ಯಾಂಕೊ ಸುಂಕ ವಸೂಲಾತಿ ಕೇಂದ್ರದ ಸಿಬ್ಬಂದಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಹೊಸಕೋಟೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಸುಂಕ ವಸೂಲಾತಿ ಕೇಂದ್ರದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಪಾಸ್ ತೋರಿಸುವ ವಿಚಾರದಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಬಿಎಂಟಿಸಿ ಚಾಲಕನ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ಬಸ್ಸು ಮುಂದೆ ಚಲಿಸದಂತೆ ತಡೆಯೊಡ್ಡಿದ್ದನ್ನು ಪ್ರಶ್ನಿಸಲು ಹೋದ ಬಸ್‌ನ ನಿರ್ವಾಹಕ ಮಂಜುನಾಥ್ ಮೇಲೆ ಸುಂಕ ವಸೂಲಾತಿ ಕೇಂದ್ರದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.
ಬಿಎಂಟಿಸಿ ನಿರ್ವಾಹಕನ ಮೇಲಿನ ಹಲ್ಲೆಯನ್ನು ಖಂಡಿಸಿ 30ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳನ್ನು ಸುಂಕ ವಸೂಲಾತಿ ಕೇಂದ್ರ ಬಳಿ ನಿಲ್ಲಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಹೊಸಕೋಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅಶ್ವತ್ ನಾರಾಯಣಸ್ವಾಮಿ ಪ್ರತಿಭಟನಾ ನಿರತರ ಮನವೊಲಿಸಿ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಿಎಂಟಿಸಿ ನಿರ್ವಾಹಕ ಮಂಜುನಾಥ್ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಹೊಸಕೋಟೆ ಠಾಣಾ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.







