ಮೊಬೈಲ್ ಕಳವು: ಇಬ್ಬರ ಬಂಧನ
ಬೆಂಗಳೂರು, ಮಾ. 14: ನಕಲಿ ಕೀ ಬಳಸಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಇಲ್ಲಿನ ಶ್ರೀರಾಮಪುರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ಬೊಮ್ಮಸಂದ್ರ ಪೋಸ್ಟ್‌ನ ಬಿ.ಎಸ್.ಕಾರ್ಮೆಲ್ ಶಾಲೆ ಸಮೀಪದ ನಿವಾಸಿಗಳಾದ ಭರತ್‌ಕುಮಾರ್(23) ಮತ್ತು ಹೇಮಂತ್ ಸಾಗರ್ ಯಾನೆ ನಾಗರಾಜ್(20)ಎಂದು ಪೊಲೀಸರು ಗುರುತಿಸಿದ್ದಾರೆ.
ಮಾ.12ರಂದು ಇಲ್ಲಿನ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರದ ಎಚ್.ಸಿ.ಬಾರ್ ಮುಂಭಾಗ ಬಂಧಿತ ಆರೋಪಿಗಳು ಕೈಯಲ್ಲಿ ಎರಡು ಚೀಲಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗುತ್ತಿದ್ದರು. ಈ ವೇಳೆ ಚೀಲಗಳನ್ನು ಪರಿಶೀಲಿಸಿದಾಗ ವಿವಿಧ ಪ್ರತಿಷ್ಠಿತ ಕಂಪೆನಿಗಳ 36 ಮೊಬೈಲ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಾದ ಭರತ್‌ಕುಮಾರ್ ಮತ್ತು ನಾಗರಾಜ್ ನಗರದ ಬೊಮ್ಮನಹಳ್ಳಿಯಲ್ಲಿರುವ ಸಂಗೀತ ಮೊಬೈಲ್ ಸ್ಟೋರ್‌ನಲ್ಲಿ ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದು, ಮಾ.5ರಂದು ಕಂಪೆನಿಯ ಬೃಹತ್ ಮಳಿಗೆಯ ನಕಲಿ ಕೀ ತಯಾರಿಸಿಕೊಂಡು ರಾತ್ರಿ 12ಗಂಟೆಗೆ ಮಳಿಗೆ ಬಾಗಿಲು ತೆರೆದು ವಿವಿಧ ಕಂಪೆನಿಗಳ ಮೊಬೈಲ್‌ಗಳನ್ನು ಕಳವು ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳಿಂದ 11.19ಲಕ್ಷ ರೂ. ವೌಲ್ಯದ ಒಟ್ಟು 36 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.





