ಆಸ್ತಿ ವಿವರಗಳ ‘ಪಾಲಿಕೆ ಭೂಮಿ’ ತಂತ್ರಾಂಶ ಬಿಡುಗಡೆ

ಬೆಂಗಳೂರು, ಮಾ. 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ಆಸ್ತಿಗಳ ಸಂಪೂರ್ಣ ವಿವರ ಮತ್ತು ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ‘ಪಾಲಿಕೆ ಭೂಮಿ’ ಎಂಬ ವಿನೂತನ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ ಎಂದು ಮೇಯರ್ ಮಂಜುನಾಥ್ ರೆಡ್ಡಿ ಹೇಳಿದರು.
ಸೋಮವಾರ ನಗರದ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಾಲಿಕೆ ಭೂಮಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ತಂತ್ರಾಂಶದಲ್ಲಿ ಪಾಲಿಕೆಯ ಸ್ವಂತ ಆಸ್ತಿಗಳು, ಗುತ್ತಿಗೆ ನೀಡಿರುವ ಆಸ್ತಿಗಳ ವಿವರ, ನ್ಯಾಯಾಲಯದಲ್ಲಿರುವ ಆಸ್ತಿಯ ವಿವರಗಳು, ಒತ್ತುವರಿಯಾಗಿರುವ ಆಸ್ತಿ, ಆಟದ ಮೈದಾನ, ಉದ್ಯಾನವನ ಕುರಿತ ಸಮಗ್ರ ಆಸ್ತಿಯ ಮಾಹಿತಿಯನ್ನು ನೋಡಬಹುದು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆಸ್ತಿ-ಪಾಸ್ತಿಗಳ ಸಮಗ್ರ ವಿವರಗಳನ್ನು ಅಂತರ್ಜಾಲದಲ್ಲಿ ಹಾಕಲಾಗುವುದು. ಇದರಿಂದಾಗಿ ಗುತ್ತಿಗೆ ನೀಡಿದ ಕಟ್ಟಡಗಳ ದಾಖಲೆಗಳ ಕಳ್ಳತನವಾಗುವುದು ತಪ್ಪಿಸುವುದು ಸೇರಿದಂತೆ ಪಾಲಿಕೆಯ ಆಸ್ತಿಗಳು ಸಂರಕ್ಷಿಸುವ ಉದ್ದೇಶದಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಪಾಲಿಕೆಯಲ್ಲಿ 5,512 ಆಸ್ತಿಗಳನ್ನು ಗುರುತಿಸಿದ್ದು, ಅದರಲ್ಲಿ 4,782 ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲು ಕಳುಹಿಸಿದ್ದು, ಅದರಲ್ಲಿ 3,715 ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿದ್ದು, ಉಳಿದ 1,067 ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. 53 ಆಸ್ತಿಗಳಿಗೆ ಪಿಐಡಿ ಸಂಖ್ಯೆ ವ್ಯತ್ಯಾಸದಿಂದ ವಲಯ ಪರಿಶೀಲನೆಗಾಗಿ ಕಳುಹಿಸಿದ್ದು, 327 ಆಸ್ತಿಗಳಿಗೆ ಪಿಐಡಿ ಸಂಖ್ಯೆ ಕಳುಹಿಸುವುದು ಬಾಕಿ ಉಳಿದಿದೆ ಎಂದು ವಿವರ ನೀಡಿದರು.
ಗುತ್ತಿಗೆ ನೀಡಿದ ಆಸ್ತಿಗಳ ಬಗ್ಗೆ ದಾಖಲೆಗಳು ಕೈತಪ್ಪಿ ಹೋದಾಗ ಅಂತಹ ಆಸ್ತಿಗಳು ಪಾಲಿಕೆಯವು ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು ಹೊಸ ತಂತ್ರಾಂಶದಿಂದ ಆಸ್ತಿಗಳು ಬೇರೆಯವರು ವಶಪಡಿಸಿಕೊಳ್ಳ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಪ್ಲಾಸ್ಟಿಕ್ ಉತ್ಪಾದಿಸುವ ಕಾರ್ಖಾನೆಗಳಿಗೆ ದಂಡ: ರಾಜ್ಯ ಸರಕಾರ ಹಾಗೂ ನ್ಯಾಯಾಲಯದ ಆದೇಶದ ಮೇರೆಗೆ ಪ್ಲಾಸ್ಟಿಕ್‌ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಗಿದ್ದರೂ ಉತ್ಪಾದನೆ ಮಾಡುವ ಕಾರ್ಖಾನೆಗಳು ಹಾಗೂ ಮಾರಾಟ ಮಾಡುವ ಅಂಗಡಿಗಳು ಕಂಡು ಬಂದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಜಿ. ಕುಮಾರ್‌ನಾಯ್ಕ್, ವಿಶೇಷ ಆಯುಕ್ತ ಕುಮಾರ್ ಪುಷ್ಕರ್, ಉಪ ಮೇಯರ್ ಹೇಮಲತಾ ಗೋಪಾಲಯ್ಯ ಉಪಸ್ಥಿತರಿದ್ದರು.
ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುಡಲು ಸಾರ್ವಜನಿಕ ಸ್ಥಳಗಳಲ್ಲಿ ಇನ್ಸುಲೇಟರ್ ಯಂತ್ರ ಆಳವಡಿಕೆ
ಮಹಿಳೆಯರು ಉಪಯೋಗಿಸಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ಸುಡಲು ದೇಶದಲ್ಲಿ ಮೊದಲ ಭಾರಿಗೆ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇನ್ಸುಲೇಟರ್ ಯಂತ್ರಗಳನ್ನು ಅಳವಡಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ನ್ಯಾಪ್‌ಕಿನ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಉಪಯೋಗಿಸಿದ ನ್ಯಾಪ್‌ಕಿನ್‌ಗಳನ್ನು ಈ ಯಂತ್ರದಲ್ಲಿ ಹಾಕಿ ಬಟನ್ ಒತ್ತಿದರೆ ಸಾಕು ಸಂಪೂರ್ಣವಾಗಿ ಸುಟ್ಟು ಬೂದಿಯಾಗುವುದು. ಇದರಿಂದ ಪರಿಸರಕ್ಕೆ ಮತ್ತು ಸುಚಿತ್ವಕ್ಕೆ ಸಹಕಾರಿಯಾಗಲಿದೆ ಎಂದು ಮೇಯರ್ ಮಂಜುನಾಥ್‌ರೆಡ್ಡಿ ತಿಳಿಸಿದರು.
ಇನ್ಸುಲೇಟರ್ ಯಂತ್ರವನ್ನು ಆವಿಷ್ಕರಿಸಿರುವ ನಿಶಾ ನಾಝ್ರೆ ಮಾತನಾಡಿ, ಈ ಯಂತ್ರವನ್ನು ತಯಾರಿಸಲು ನಾಲ್ಕು ವರ್ಷ ತಗುಲಿದೆ. ಈ ಯಂತ್ರದ ಬಳಕೆಯಿಂದ ನ್ಯಾಪ್‌ಕಿನ್‌ಗಳು ಅನಗತ್ಯವಾಗಿ ಭೂಮಿಗೆ ಸೇರುವುದನ್ನು ನಿಲ್ಲಿಸಬಹುದು ಎಂದರು. ಮುಂದಿನ ತಿಂಗಳಿಂದ ಈ ಯಂತ್ರಗಳನ್ನು ಬಸ್ ನಿಲ್ದಾಣ, ಶಾಲಾ ಕಾಲೇಜು, ಸಾರ್ವಜನಿಕ ಶೌಚಾಲಯ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಇನ್ಸುಲೇಟರ್ ಯಂತ್ರದ ಬಳಕೆ ಬಗ್ಗೆ ಮಾಹಿತಿ ನೀಡಿದರು.







