ಆರ್‌ಟಿಐ: ಕಾಲಾವಕಾಶ ವಿಸ್ತರಣೆಗೆ ಒತ್ತಾಯ
ಬೆಂಗಳೂರು, ಮಾ. 14: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಐ) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಶೇ.25 ಮೀಸಲಾತಿ ಸೀಟುಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹಾಗಾಗಿ ಇನ್ನೂ ಹೆಚ್ಚಿನ ಕಾಲಾವಕಾಶವನ್ನು ನೀಡಬೇಕೆಂದು ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆಯ ಅಧ್ಯಕ್ಷ ರಾಮು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಅರ್ಜಿ ಸಲ್ಲಿಸಲು ಸರಕಾರದಿಂದ ನಿಗದಿ ಪಡಿಸಿರುವಂತಹ ಕಾಲಾವಕಾಶವನ್ನು ಇನ್ನೂ 10ದಿನಗಳ ಕಾಲ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕಳೆದ ವರ್ಷ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿತ್ತು, ಆದರೆ ಈ ಬಾರಿ ಕೇವಲ 22 ದಿನ ಮಾತ್ರ ನೀಡಲಾಗಿದೆ. ಇಂದು ನಿಗದಿತ ಸಮಯಕ್ಕೆ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಪೋಷಕರು ತಾಲೂಕು ಕಚೇರಿಗಳಿಗೆ 21 ದಿನ ಅಲೆದರೂ ದೊರೆಯುತ್ತಿಲ್ಲ. ಅಂತಹದರಲ್ಲಿ ಹೇಗೆ ಪೋಷಕರು ಇಷ್ಟು ಕಡಿಮೆ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಸೈಬರ್‌ಕೆಫೆಗಳು ಬೆಳಗ್ಗೆ 10 ಕ್ಕೆ ಸಂಜೆ 7ಕ್ಕೆ ಮುಚ್ಚುತ್ತವೆ. ವಿದ್ಯುತ್ ಸಮಸ್ಯೆಯಿಂದಾಗಿ ದಿನದಲ್ಲಿ ಒಂದೆರಡು ಗಂಟೆಗಳು ಮಾತ್ರ ಕೆಲಸ ಮಾಡುತ್ತವೆ. ವೆಬ್‌ಸೈಟ್ ತಾಂತ್ರಿಕ ದೋಷವನ್ನು ಮುಂದು ಮಾಡಲಾಗುತ್ತದೆ. ಆದ್ದರಿಂದ ಸರಕಾರ ಕೂಡಲೇ ಇನ್ನೂ ಹೆಚ್ಚಿನ ಕಾಲಾವಕಾಶವನ್ನು ನೀಡಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಹಾಗೂ ವೆಬ್‌ಸೈಟ್ ಸಮರ್ಪಕವಾಗಿ ಬಳಕೆಯಾಗುವಂತೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಹಾಗೆಯೇ ಅರ್ಜಿ ಸಲ್ಲಿಸಿ ಆಯ್ಕೆಯಾದ ಮಕ್ಕಳನ್ನು ಕೆಲವು ಖಾಸಗಿ ಶಾಲೆಗಳು ಹೀನಾಯವಾಗಿ ನಡೆಸಿಕೊಳುತ್ತಿವೆ. ಅಲ್ಲದೇ ಸರಕಾರದಿಂದ ಮಕ್ಕಳಿಗೆ ಪುಸ್ತಕ, ಬಟ್ಟೆ ಇತರ ಖರ್ಚುಗಳಿಗೆ ಹಣವನ್ನು ನೀಡುತ್ತಿದ್ದರೂ ಮಕ್ಕಳ ಪೋಷಕರಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ತಕ್ಷಣ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಪೋಷಕರಿಗೆ ಈ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕ ನಾಮಫಲಕಗಳನ್ನು ಹಾಕಬೇಕು ಹಾಗೂ ಶಾಲೆಗಳಿಗೆ ನೋಟಿಸ್ ನೀಡಿ ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ಯಾವುದೇ ಕಾರಣಕ್ಕೂ ಯಾವುದೇ ಶಾಲೆಯಲ್ಲಿ ಸೀಟುಗಳನ್ನು ಬಾಕಿ ಉಳಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.







