ಸರಣಿ ಅಪಘಾತ: ಮೂವರು ಬಲಿ
ಬೆಂಗಳೂರು, ಮಾ. 14: ನಗರದಲ್ಲಿ ಸರಣಿ ಅಪಘಾತವಾಗಿ ಮೂವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಶಿವಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಢಿಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿ ನಗರದ ಮದ್ದೂಮನ ಪಾಳ್ಯದ ಸರೋಜಮ್ಮ (55) ಮೃತಪಟ್ಟವರು.
ಚಾಲಕ ಸಾವು:
ಟ್ಯಾಂಕರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಉರಳಿಬಿದ್ದಿದ್ದರಿಂದ ಚಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಹೆಣ್ಣೂರು ಮುಖ್ಯರಸ್ತೆಯ ರಾಯಲ್ ಅಪಾರ್ಟ್‌ಮೆಂಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಸಾಗರ ಮೂಲದ ಮನೋಹರ್ (22) ಮೃತಪಟ್ಟವರು. ಇವರು ನಗರದ ಹೆಣ್ಣೂರಿನ ಪ್ರಶಾಂತ್ ಮಿನಿ ವಾಟರ್ ಟ್ಯಾಂಕರ್‌ನಲ್ಲಿ ಚಾಲಕನಾಗಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ಹೆಣ್ಣೂರು ಕ್ರಾಸ್‌ನಿಂದ ಭೈರತಿ ಕಡೆಗೆ ನೀರು ತುಂಬಿಕೊಂಡು ಹೋಗುತ್ತಿದ್ದಾಗ ರಾಯಲ್ ಅಪಾರ್ಟ್‌ಮೆಂಟ್ ಬಳಿ ಆಯತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಟ್ಯಾಂಕರ್ ಉರುಳಿಬಿದ್ದು ಅದರಡಿ ಸಿಕ್ಕ ಮನೋಹರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇಲ್ಲಿನ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಸಾವು:
ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಗೋಡೆಗೆ ಢಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಇಲ್ಲಿನ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಅಶೋಕನಗರದ ಸಮೀರ್(19) ಎಂದು ಗುರುತಿಸಲಾಗಿದೆ.
ಈತ ಕೌಕ್ಸ್‌ಟಾನ್‌ನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ವರ್ಷ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಮೀರ್ ರಾತ್ರಿ 10:30ರ ವೇಳೆ ಬಳ್ಳಾರಿ ರಸ್ತೆಯಲ್ಲಿರುವ ಸಂಬಂಧಿಕರ ವಿವಾಹ ಸಮಾರಂಭಕ್ಕೆ ಹೋಗಿ ಮನೆಗೆ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದ ವೇಳೆ ನಗರದ ವೌಂಟ್ ಕಾರ್ಮೆಲ್ ಕಾಲೇಜು ಬಳಿಯ ಅರಮನೆ ಮೈದಾನದ ಗೋಡೆಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







