ಕಿನ್ನಿಗೋಳಿ: ರಿಕ್ಷಾ ಚಾಲಕರಿಂದ ಶ್ರದ್ಧಾಂಜಲಿ ಸಭೆ
ಕಿನ್ನಿಗೋಳಿ, ಮಾ.15: ಕಳೆದ ಶನಿವಾರ ಸುರತ್ಕಲ್ ಪಡ್ರೆಯಲ್ಲಿ ಅಪಘಾತ ಸಂಭವಿಸಿ ಅಕಾಲಿಕ ಮರಣಕ್ಕಿಡಾದ ಪಕ್ಷಿಕೆರೆಯ ರಿಕ್ಷಾ ಚಾಲಕ ಸದಾನಂದ ಸುವರ್ಣ ಅವರಿಗೆ ವೂರ ಶ್ರದ್ಧಾಂಜಲಿ ಸಭೆ ಪಕ್ಷಿಕೆರೆ ರಿಕ್ಷಾ ನಿಲ್ದಾಣದಲ್ಲಿ ನಡೆಯಿತು.
ಈ ಸಂದರ್ಭ ನುಡಿನಮನ ಸಲ್ಲಿಸಿದ ಪಕ್ಷಿಕೆರೆ ಸೈಟ್ ಜೂದರ ಚರ್ಚ್‌ನ ಧರ್ಮಗುರು ರೆ. ಫಾ. ಆಂಡ್ರ್ಯೂ ಲಿಯೋ ಡಿ ಸೋಜಾ, ಒಬ್ಬ ಮನುಷ್ಯ ಎಷ್ಟು ಕಾಲ ಬಾಳುತ್ತಾನೆ ಎನ್ನುವುದಕ್ಕಿಂತ ಆತ ಜೀವಿತಾವಧಿಯಲ್ಲಿ ಮಾಡಿದ ಸಮಾಜ ಸೇವೆ, ಪರೋಪಕಾರಗಳಿಂದ ಅಜರಾಮರರಾಗಿರುತ್ತಾರೆ. ಸದಾನಂದನವರೂ ಜಾತಿ ಭೇಧ ಮರೆತು ಪರೋಪಕರಿತಯಾಗಿ ಜೀವಿಸಿದ್ದರು ಎಂದರು.
ಬಳಿಕ ಮಾತನಾಡಿದ ಪಕ್ಷಿಕೆರೆ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಮುಂದಿನ ಅಗಸ್ಟ್ ತಿಂಗಳ ಒಳಗಾಗಿ ಸಂಘದ ವತಿಯಿಂದ ಸದಾನಂದ ಸುವರ್ಣರವರ ಕುಟುಂಬಕ್ಕೆ 2 ಲಕ್ಷ ರೂ. ಧನ ಸಹಾಯ ನೀಡುವುದಾಗಿ ತಿಳಿಸಿದರು.
ಪಕ್ಷಿಕೆರೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಕಾದರ್ ಮದನಿ, ಸುರಗಿರಿ ದೇವಳ ಅರ್ಚಕ ವಿಶ್ವೇಶ್ವರ ಭಟ್, ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಕಿನ್ನಿಗೋಳಿ ಯುಗಪರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯೆ ಕಸ್ತೂರಿ ಪಂಜ, ಜಿ.ಪಂ. ಮಾಜೀ ಸದಸ್ಯ ಈಶ್ವರ್ ಕಟೀಲು, ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ನಾಗೇಶ್, ಪಂಚಾಯತ್ ಸದಸ್ಯ ಸುರೇಶ್ ಪಂಜ, ಪಿ. ಕೆ. ಶೆಟ್ಟಿ, ಬಾಲಾದಿತ್ಯ ಆಳ್ವ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.





