ರವಿಶಂಕರರ ವಿಶ್ವ ಸಂಸ್ಕೃತಿ ಮೇಳದಲ್ಲಿ ಕಳ್ಳತನ : 30 ಜನರ ಸೆರೆ,70 ಎಫ್‌ಐಆರ್ ದಾಖಲು

ಹೊಸದಿಲ್ಲಿ,ಮಾ.15: ಇಲ್ಲಿಯ ಯಮುನಾ ನದಿಯ ತೀರದಲ್ಲಿ ಮೂರು ದಿನಗಳ ಕಾಲ ನಡೆದ,ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಅವರು ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ದೇಶವಿದೇಶಗಳ ಲಕ್ಷಾಂತರ ಜನರನ್ನು ಗುರಿಯಾಗಿಸಿಕೊಂಡು ದೇಶಾದ್ಯಂತದಿಂದ ಬಂದಿದ್ದ ಕಳ್ಳರ ತಂಡಗಳೂ ಅಲ್ಲಿ ಬೀಡು ಬಿಟ್ಟಿದ್ದವು. ಭಾರೀ ಭದ್ರತೆಯ ನಡುವೆಯೂ ತಮ್ಮ ಕೈಚಳಕವನ್ನು ಮೆರೆದ ಚೋರ ಶಿಖಾಮಣಿಗಳು ಚಿನ್ನಾಭರಣಗಳು ಮತ್ತು ನಗದು,ಲ್ಯಾಪ್‌ಟಾಪ್‌ನಂತಹ ಅಮೂಲ್ಯ ಸೊತ್ತುಗಳನ್ನು ಎಗರಿಸಿದ್ದಾರೆ. ಈ ಸಂಬಂಧ ಕನಿಷ್ಠ 70 ಎಫ್‌ಐಆರ್‌ಗಳು ದಾಖಲಾಗಿದ್ದು, ಪೊಲೀಸರು ಸುಮಾರು 30 ಜನರನ್ನು ಬಂಧಿಸಿದ್ದಾರೆ.
ಪೊಲೀಸರು ಭೇದಿಸಿರುವ ಇಂತಹ ಗ್ಯಾಂಗ್‌ಗಳ ಪೈಕಿ ಕೆಲವು ಉತ್ತರ ಪ್ರದೇಶ,ಹರ್ಯಾಣ,ತಮಿಳುನಾಡು ಮತ್ತು ಕೇರಳ ಮೂಲದ್ದಾಗಿವೆ. ಈ ಗ್ಯಾಂಗ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವ್ಯವಸ್ಥಿತ ಯೋಜನೆಯನ್ನು ರೂಪಿಸಿಕೊಂಡೇ ಈ ಕಳ್ಳರ ತಂಡಗಳು ದಿಲ್ಲಿಗೆ ಆಗಮಿಸಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ತಿಳಿಸಿದರು.
ಈ ತಂಡಗಳು ಅತಿಥಿಗಳನ್ನು ಮಾತ್ರವಲ್ಲ,ಉತ್ಸವ ನಡೆಯುತ್ತಿದ್ದ ತಾಣದಲ್ಲಿದ್ದ ಹಲವಾರು ಹಂಗಾಮಿ ಅಂಗಡಿಗಳನ್ನೂ ಗುರಿಯಾಗಿಸಿಕೊಂಡಿದ್ದರು. ಉದ್ಘಾಟನಾ ದಿನದಂದು ಸುಮಾರು 20 ಕಳ್ಳತನ ಪ್ರಕರಣಗಳು ವರದಿಯಾಗಿದ್ದರೆ ಸಮಾರೋಪ ದಿನವಾಗಿದ್ದ ರವಿವಾರ ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತ 20 ಜನರು ಉತ್ಸವ ತಾಣದಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಕೆಲವರನ್ನು ಪೊಲೀಸರು ಹಿಡಿದಿದ್ದರೆ ಇನ್ನು ಕೆಲವರನ್ನು ಜನರೇ ಹಿಡಿದು ಕೊಟ್ಟಿದ್ದಾರೆ.
ಕೆಲವು ಪಿಕ್‌ಪಾಕೆಟ್ ತಂಡಗಳಲ್ಲಿ ಕೇವಲ ಮಹಿಳೆಯರೇ ಇದ್ದು, ಈ ಪೈಕಿ ಕೆಲವರು ಈಗ ಜೈಲಿನಲ್ಲಿ ದಣಿವಾರಿಸಿಕೊಳ್ಳುತ್ತಿದ್ದಾರೆ.







