ಮಂಗಳೂರು : ಜೋಕಟ್ಟೆ ಮಾಲಿನ್ಯ: ಉನ್ನತ ಮಟ್ಟದ ಸಭೆ
ಮಂಗಳೂರು, ಮಾ. 15: ಎಂಆರ್‌ಪಿಎಲ್ ಸಂಸ್ಥೆಯಿಂದ ಜೋಕಟ್ಟೆ ಪರಿಸರದಲ್ಲಿ ಉಂಟಾಗುತ್ತಿರುವ ಮಾಲಿನ್ಯ ನಿಯಂತ್ರಣದ ಬಗ್ಗೆ ರಾಜ್ಯ ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಪರಿಸರ ಇಲಾಖೆ) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದ್ದಾರೆ.
ಅವರು ಸೋಮವಾರ ಸಂಜೆ ಜಿ.ಪಂ. ಸಭಾಂಗಣದಲ್ಲಿ ಈ ಸಂಬಂಧ ಜೋಕಟ್ಟೆ ನಾಗರಿಕರ ಹಗೂ ಎಂಆರ್‌ಪಿಎಲ್ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದರು. ಈ ಉನ್ನತ ಮಟ್ಟದ ಸಭೆಯು ಜೋಕಟ್ಟೆ ಪರಿಸರದಲ್ಲಿ ಕಂಡುಬರುತ್ತಿರುವ ಮಾಲಿನ್ಯ ನಿಯಂತ್ರಿಸಲು ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಅವರು ತಿಳಿಸಿದರು. ಶೀಘ್ರವೇ ಈ ಸಭೆ ನಡೆಸಲು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸಭೆಯಲ್ಲಿ ಮಾತನಾಡಿ, ಜೋಕಟ್ಟೆ ಪರಿಸರದಲ್ಲಿ ಉಂಟಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಅನೇಕ ಸಭೆ ನಡೆಸಿದರೂ, ಎಂಆರ್‌ಪಿಎಲ್ ಸಂಸ್ಥೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನವಸತಿ ಪ್ರದೇಶ ಮತ್ತು ಕೈಗಾರಿಕಾ ಘಟಕದ ಮಧ್ಯೆ ಬಫರ್ ಝೋನ್ ಇರಬೇಕಾಗಿದೆ ಎಂದರು.
ಸಭೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಪೊಲೀಸ್ ಆಯುಕ್ತ ಚಂದ್ರಶೇಖರ್, ಜಿ.ಪಂ. ಸಿಇಓ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ಬಶೀರ್ ಅಹಮದ್, ಮುನೀರ್ ಕಾಟಿಪಳ್ಳ, ಜೋಕಟ್ಟೆ ನಾಗರೀಕ ಸಮಿತಿ ಮುಖಂಡರು, ಎಂಆರ್‌ಪಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.







