ಟಿ20 ವೀಕ್ಷಣೆಗೆ 7 ಪಾಕ್ ರಾಜತಾಂತ್ರಿಕರಿಗೆ ಅನುಮತಿ ನಕಾರ
ಇಸ್ಲಾಮಾಬಾದ್, ಮಾ. 15: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾರ್ಚ್ 19ರಂದು ನಡೆಯಲಿರುವ ವಿಶ್ವ ಟಿ20 ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಕೋಲ್ಕತಕ್ಕೆ ಹೋಗಲು ಏಳು ಪಾಕಿಸ್ತಾನಿ ರಾಜತಾಂತ್ರಿಕರಿಗೆ ಭಾರತ ಮಂಗಳವಾರ ಅನುಮತಿ ನಿರಾಕರಿಸಿದೆ.
ಕೋಲ್ಕತಕ್ಕೆ ಹೋಗಲು ಅವರಿಗೆ ಅನುಮತಿ ನೀಡದಿರುವ ಭಾರತದ ನಿರ್ಧಾರ ಅಸ್ವೀಕಾರಾರ್ಹ ಹಾಗೂ ಈ ಬಗ್ಗೆ ಅಧಿಕೃತ ಪ್ರತಿಭಟನೆ ಸಲ್ಲಿಸಲು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಉಪ ಹೈಕಮಿಶನರ್‌ರನ್ನು ಕರೆಸಲಾಯಿತು ಎಂದು ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನಿ ಮೂಲಗಳು ತಿಳಿಸಿವೆ.
ಆದಾಗ್ಯೂ, ಕೇವಲ ಐವರು ಪಾಕ್ ರಾಜತಾಂತ್ರಿಕರಿಗೆ ಕೋಲ್ಕತಕ್ಕೆ ಹೋಗಲು ಅನುಮತಿ ನಿರಾಕರಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ‘‘ಅವರ ಪೈಕಿ ಇಬ್ಬರಿಗೆ ಕೋಲ್ಕತಕ್ಕೆ ಹೋಗಲು ಪ್ರಯಾಣ ಅನುಮೋದನೆಯನ್ನು ನೀಡಲಾಗಿದೆ’’ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದರು.
ಇತರ ಐವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಭಾವಿಸಲಾಗಿದೆ.





