ಬಂಟ್ವಾಳ: ಯುವಕನಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ; ಕೊಲೆ ಬೆದರಿಕೆ

ಬಂಟ್ವಾಳ: ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಬಂಟ್ವಾಳ ನಗರ ಠಾಣೆ ಪೊಲೀಸರು ಮಂಗಳವಾರ ದೂರು ದಾಖಲಿಸಿದ್ದಾರೆ.
ಮುಹಮ್ಮದ್ ಯಾಝ್(35) ಹಲ್ಲೆಗೊಳಗಾದ ಯುವಕ. ಇವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಣೆಮಂಗಳೂರು ಹೆದ್ದಾರಿಯ ಸಮೀಪದ ಹೊಟೇಲ್ ಹೈವೆ ಬಳಿ ಇರುವ ಮೊಬೈಲ್ ಅಂಗಡಿಗೆ ೈನಾನ್ಸ್‌ವೊಂದರ ಸಿಬ್ಬಂದಿಯೊಂದಿಗೆ ಬಂದ ಪೊಲೀಸ್ ಸಿಬ್ಬಂದಿ ರೇವಣ್ಣ ಯಾನೆ ಅರುಣ್ ಎಂಬವರು ಫಯಾಝ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಫಯಾಝ್‌ಗೆ ಸೇರಿದ ಅಂಗಡಿಯ ಸಾಮಗ್ರಿಗಳು ಹಾನಿಗೊಸಿದ್ದಾರೆ ಎಂದು ದೂರಲಾಗಿದೆ. ಮೀಟರ್ ಬಡ್ಡಿ ವ್ಯವಹಾರವೇ ಘಟನೆ ಕಾರಣ ಎನ್ನಲಾಗಿದ್ದು, ಪೊಲೀಸ್ ಸಿಬ್ಬಂದಿ ರೇವಣ್ಣ ಈ ಹಿಂದೆಯೂ ಬಡ್ಡಿ ವ್ಯವಹಾರಕ್ಕೆ ಸಂಬಧಿಸಿ ಹಲವರ ಮೇಲೆ ಹಲ್ಲೆಗೆ ಯತ್ನ, ಬೆದರಿಕೆ ಹಾಕಿರುವ ಆರೋಪಗಳಿವೆ ಎಂದು ತಿಳಿದು ಬಂದಿದೆ. ಮಾಲಕಗೂ ಬೆದರಿಕೆ!: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲಾಧಿಕಾರಿಗಳ ಆದೇಶ ಇಲ್ಲದೆ ದಾಳಿ ನಡೆಸಿದ್ದಲ್ಲದೆ ಹಲ್ಲೆ, ಬೆದರಿಕೆ ಒಡ್ಡಿರುವ ಪ್ರಕರಣವನ್ನು ಮುಚ್ಚಿ ಹಾಕುವಂತೆ ಪೊಲೀಸ್ ಅಧಿಕಾರಿಗಳು ಹೊಟೇಲ್ ಮಾಲಕರಿಗೂ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಯುವಕ ನೀಡಿರುವ ದೂರನ್ನು ಸ್ವೀಕರಿಸಲು ವಿಳಂಬ ಮಾಡಿದ ಬಂಟ್ವಾಳ ಪೊಲೀಸ್ ಅಧಿಕಾರಿಗಳ ವಿರುದ್ಧ ಹೊಟೇಲ್ ಮಾಲಕರು ಹಿರಿಯಾಧಿಕಾರಿಗಳಿಗೆ ದೂರು ನೀಡಿದ್ದು, ಬಳಿಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿತ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಹೊಟೇಲ್ ಮಾಲಕರಾದ ಅಬ್ದುಲ್ ಜಬ್ಬಾರ್ ಸಹಿತ ಹಲವಾರು ಮಂದಿ ಆಗ್ರಹಿಸಿದ್ದು, ಸಚಿವರಿಗೂ ದೂರು ನೀಡಲಾಗಿದೆ.





