'ಆಯುಷ್'ನಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ: ಸತ್ಯ ಬಹಿರಂಗ ಪಡಿಸಿದ ಪತ್ರಕರ್ತನ ಬಂಧನ
ಬುಧವಾರದ ಬೆಳವಣಿಗೆ:
ಪತ್ರಕರ್ತ ಪುಷ್ಪ್ ಶರ್ಮ ಅವರನ್ನು ಬುಧವಾರ ಬೆಳಗ್ಗೆ ಪೊಲೀಸರು ಬಿಡುಗಡೆಗೊಳಿಸಿದ್ದು, ಗುರುವಾರ ಮತ್ತೆ ತಮ್ಮೆದುರು ಹಾಜರಾಗುವಂತೆ ಸೂಚಿಸಿದ್ದಾರೆ.
ಹೊಸದಿಲ್ಲಿ, ಮಾ.15 : ಕೇಂದ್ರ ಸರಕಾರದ ‘ಆಯುಷ್’ನ ಹುದ್ದೆಗಳಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ ಎನ್ನುವುದು ಆರ್‌ಟಿಐ ಆಧಾರದಲ್ಲಿ ಬಹಿರಂಗಪಡಿಸಿದ ಪತ್ರಕರ್ತರೊಬ್ಬರನ್ನು ಮಂಗಳವಾರ 6.30ರ ವೇಳೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕೋಟ್ಲಾ ಮುಬಾರಕ್‌ಪುರದ ಪೊಲೀಸ್ ಠಾಣೆಯ ಪೊಲೀಸರೆಂದು ಹೇಳಲಾದ ಅಪರಿಚಿತರು ಪತ್ರಕರ್ತ ಪುಷ್ಪ್ ಶರ್ಮನನ್ನು ಅವರ ಲಜಪತ್‌ನಗರದ ನಿವಾಸದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ಎಂದು ಮಿಲ್ಲಿ ಗಜೆಟ್ ವರದಿ ಮಾಡಿದೆ. ಪೊಲೀಸರು ಎಂದು ಹೇಳಿಕೊಂಡ ಕೆಲವರು ತನ್ನನ್ನು ಬಲವಂತವಾಗಿ ಎತ್ತೊಯ್ದಿದ್ದಾರೆ ಎಂದು ಶರ್ಮ ಮಿಲ್ಲಿ ಗಜೆಟ್‌ಗೆ ತಿಳಿಸಿದ್ದಾರೆ.
ಪುಷ್ಪ್‌ರವರನ್ನು ಕೋಟ್ಲಾ ಮುಬಾರಕ್‌ಪುರದ ಪೊಲೀಸ್ ಠಾಣೆಗೆ ಕೊಂಡ್ಯೊಲಾಗಿದೆ. ಅವರ ಮೊಬೈಲ್ ಸಂಪರ್ಕ ಸಂಜೆ 7:22 ರ ಅನಂತರ ಕಡಿತಗೊಂಡಿದೆ. ಮೊಬೈಲ್ ಕರೆಯನ್ನು ಆತ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಕೋಟ್ಲಾ ಮುಬಾರಕ್ ಪೊಲೀಸ್ ಠಾಣೆಗೆ ಮಿಲ್ಲಿ ಗಜೆಟ್ ಸಂಪರ್ಕಿಸಿದಾಗ ಉತ್ತರಿಸಲು ಅವರು ನಿರಾಕರಿಸಿದ್ದಾರೆ ಎಂದು ಮಿಲ್ಲಿ ಗಜೆಟ್ ತಿಳಿಸಿದೆ. ಆಯುಷ್ ಸಚಿವಾಲಯದಲ್ಲಿ ಯೋಗ ತರಬೇತುದಾರರಾಗಿ ಮುಸ್ಲಿಂರನ್ನು ನೇಮಕ ಮಾಡುವುದಿಲ್ಲ. ಸರಕಾರದ ನಿಯಮ ಪ್ರಕಾರ ಅವಕಾಶವಿಲ್ಲ ಎಂದು ಆರ್‌ಟಿಐ ಯಲ್ಲಿ ಕೇಳಲಾದ ಪ್ರಶ್ನೆಗೆ ಆಯುಷ್ ಸಚಿವಾಲಯ ಇತ್ತೀಚೆಗೆ ಉತ್ತರಿಸಿತ್ತು . ಇದನ್ನು ಪುಷ್ಪ್ ಕುಮಾರ್ ಮಿಲ್ಲಿ ಗಜೆಟ್‌ನಲ್ಲಿ ವರದಿಯನ್ನು ಪ್ರಕಟಿಸಿದ್ದರು. ಇತರ ಪತ್ರಿಕೆಗಳು, ಸಾಮಾಜಿಕ ತಾಣಗಳಲ್ಲೂ ಈ ಸುದ್ದಿ ಪ್ರಕಟವಾಗಿದ್ದವು. ಆದರೆ ಆಯುಷ್ ಸಚಿವಾಲಯ ಆರ್‌ಟಿಐ ಉತ್ತರ ನಕಲಿ ಎಂದು ಸಮರ್ಥಿಸಿಕೊಂಡಿತ್ತು . ಆದರೆ ಪತ್ರಕರ್ತ ತನಗೆ ಅಧಿಕೃತ ಆಯುಷ್ ಸಚಿವಾಲಯದಿಂದ ಉತ್ತರ ದೊರಕಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿರಬಹುದು ಎಂದು ಶಂಕಿಸಲಾಗಿದೆ.







