ಅಂಬೇಡ್ಕರ್, ಬುದ್ಧನ ಸೆರಗು ಹಿಡಿದು...

ದೇಸೀ ಸೊಗಡನ್ನು ಇಟ್ಟು ಕವಿತೆ ಬರೆಯುವ ಮಂಜು ಕೋಡಿ ಉಗನೆ ಅವರ ‘ನಾನು ಮಲ್ಲಿಗೆ ಮತ್ತು ದೇವರು’ ಕೃತಿ ಸಂವೇದನಾಶೀಲ ಮನಸ್ಸು ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಒಡಮೂಡಿರುವುದು. ಒಡಲ ಕುಲುಮೆಯಿಂದೆದ್ದ ಸಾಲುಗಳು, ನೋವುಗಳು ಇಲ್ಲಿ ಕವಿತೆಯ ರೂಪ ಪಡೆದಿದೆ. ಎಲ್ಲ ಆಕ್ರೋಶದ ಸದ್ದುಗಳ ನಡುವೆಯೂ, ಬುದ್ಧ, ಅಂಬೇಡ್ಕರ್, ತಾಯಿಯ ಕುರಿತಂತೆ ಬರೆಯುವಾಗ ಪುಂಗಿಯ ನಾದಕ್ಕೆ ತಲೆಯಾಡಿಸುವ ಹಾವಿನಂತೆ ಸಾಲುಗಳು ಬಳುಕುತ್ತವೆ. ‘‘ತಾಯಿ ಕರುಳ ಕುಡಿಯು ನೀನು
ಕರುಳ ಮಾಲೆ ಪ್ರೀತಿ ಬಂಧ
ಒಡಲ ತೊಗಲ ಅನುಬಂಧ
ಹೃದಯ ಕಮಲ ಕರುಣ ಮಾಲೆ
ಪ್ರೀತಿಗೆ ಮೂಲ ಹೆತ್ತ ತಾಯಿ
ದ್ವೇಷಕ್ಕೆ ಇರುವರೆ ಯಾರಾದರೂ ತಾಯಿ?’’ ಎಂಬ ಪ್ರಶ್ನೆಯನ್ನಿಡುವ ಅವರ ಕವಿತೆಯಲ್ಲಿ ಪ್ರೀತಿಯ ತಹತಹಿಕೆಯಷ್ಟೇ ಇದೆ. ಅವರ ಕವಿತೆಗಳ ಸಿಟ್ಟಿನ ಮೂಲವೂ ಪ್ರೀತಿಯ ಹಪಹಪಿಕೆಯೇ ಆಗಿದೆ.
‘‘ಮುಟ್ಟು ಯಾವುದು ಹೇಳಯ್ಯ?
ಅಮಾದಿಯ ಅಂಡು ತೊಳೆವ ಜಲಮುಟ್ಟೆ
ಮುಟ್ಟು ಯಾವುದು ಹೇಳಯ್ಯ?
ಮುಳುಗಿ ಮಡಿವ ನನ್ನ ಮುಟ್ಟದೆ
ಮಡಿಯೆಂದು ಹಾರುವರ ಅಂತರಂಗ ಮುಟ್ಟೆ...’’
ಎಂದು ಅಸ್ಪಶ್ಯತೆಯ ವಿರುದ್ಧ ಕವಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರ ಹೆಚ್ಚಿನ ಕವಿತೆಗಳು ಅಸ್ಪಶ್ಯತೆ, ಜಾತೀಯತೆಯ ಸುತ್ತ ಸುತ್ತುತ್ತವೆ. ಹಾಗೆಯೇ ಮೇಲುಕೀಳುಗಳ ವಿರುದ್ಧ ಧ್ವನಿಯೆತ್ತಿದ ಬುದ್ಧ, ಅಂಬೇಡ್ಕರ್‌ರ ಸೆರಗು ಹಿಡಿದು ಓಡಾಡುತ್ತವೆ. ಅವರ ಕವಿತೆಗಳ ಹಲವು ಸಾಲುಗಳಲ್ಲಿ ಜಾನಪದೀಯ ಲಯಗಳಿವೆ. ಭಾಷೆಗಳು ಆ ಲಯಕ್ಕೆ ಪೂರಕವಾಗಿವೆ. ಅವರೊಳಗಿನ ಆಕ್ರೋಶ, ನೋವು ಕಾವ್ಯದ ಪಾತಳಿಯಲ್ಲಿ ಹರಿಯುವುದಕ್ಕೆ ಇನ್ನಷ್ಟು ದಾರಿಗಳನ್ನು ಹುಡುಕಬೇಕು. ಈ ನಿಟ್ಟಿನಲ್ಲಿ, ಬಂಜಗೆರೆಯವರು ಬೆನ್ನುಡಿಯಲ್ಲಿ ಹೇಳುವಂತೆ, ವೌಖಿಕ ಕಥನಗಳ ವರ್ಣಕತೆ, ಜನಪದ ತತ್ವಜ್ಞಾನಗಳ ಮೋಹಕತೆ ಹಾಗೂ ಆಚರಣಾ ಲೋಕದ ಸಾಂಕೇತಿಕತೆಯ ಅಂಶಗಳನ್ನು ಅಳವಡಿಸಿಕೊಂಡು ಇನ್ನಷ್ಟು ದಟ್ಟವಾದ ಅನುಭವಗಳನ್ನು ತೆರೆದಿಡುವ ಅವಕಾಶ ಮಂಜು ಅವರಿಗಿದೆ.
ಜೋಳಿಗೆ ಪ್ರಕಾಶನ, ಚಾಮರಾಜ ನಗರ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 9845993527 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.