ಮೇಕ್ ಇನ್ ಇಂಡಿಯಾ: ಶಿಕ್ಷಣ ವ್ಯವಸ್ನ ನೆಲಸಮವೇ?
ವಿಶ್ವವಿದ್ಯಾನಿಲಯಗಳ ಮೇಲಿನ ಇತ್ತೀಚಿನ ದಾಳಿಯನ್ನು ನೋಡಿದರೆ, ನಮ್ಮ ಮನಸ್ಸಿನಲ್ಲಿ ಸಹಜವಾಗಿಯೇ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ದೇಶದ ಯುವ ಮನಸ್ಸುಗಳಿಗೆ ಶಿಕ್ಷಣ ನೀಡುವುದಕ್ಕೆ ಬಿಜೆಪಿ ಏಕೆ ವಿರುದ್ಧವಾಗಿದೆ? ರೋಹಿತ್ ವೇಮುಲಾ ಪ್ರಕರಣ, ಪುಣೆ ಎಫ್‌ಟಿಟಿಐ ಅಶಾಂತಿ, ಜಾಧವಪುರ ವಿವಿ ಹೋರಾಟ, ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ಆರೆಸ್ಸೆಸ್ ಒಲವಿನ ವ್ಯಕ್ತಿಗಳ ನೇಮಕ, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಬಜೆಟ್ ಅನುದಾನ, ತೀರಾ ಇತ್ತೀಚೆಗಿನ ಜೆಎನ್‌ಯು ಘಟನೆ ಇವುಗಳು ಬಿಜೆಪಿಯ ವಿಸ್ತೃತ ರಾಜಕೀಯ ಕಾರ್ಯಸೂಚಿಯನ್ನು ನಿರೂಪಿಸುತ್ತವೆ. ಜೆಎನ್‌ಯು ಘಟನೆಯ ಬಳಿಕ ಭಾರತದ ವಿಶ್ವವಿದ್ಯಾನಿಲಯಗಳ ಸೈದ್ಧಾಂತಿಕ ನಿಯಂತ್ರಣಕ್ಕೆ ಸರಕಾರ ಶತಾಯ ಗತಾಯ ಹೋರಾಡುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಅದಾಗ್ಯೂ ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣಕ್ಕೆ ಮಾತ್ರ ಗಮನ ಹರಿಸದಿರುವುದೂ ಅಷ್ಟೇ ವಾಸ್ತವ. ಈ ವಿಸ್ತೃತ ಕಾರ್ಯಸೂಚಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ, ಬಹುಮುಖಿ ಮಸೂರಗಳಿಂದ ಇದನ್ನು ನೋಡುವ ಅಗತ್ಯವಿದೆ. ಅವುಗಳಲ್ಲಿ ಒಂದು ಎಂದರೆ, ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಆಂದೋಲನ.
ಬಿಜೆಪಿ ಸರಕಾರ ರಚನೆಯಾದಾಗಿನಿಂದಲೂ ಕೌಶಲ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಮೇಕ್ ಇನ್ ಇಂಡಿಯಾ ಆಂದೋಲನವನ್ನು ಉತ್ತೇಜಿಸುವ ಹಲವು ನೀತಿ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮ ಪ್ರಧಾನಿ ಕೂಡಾ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದಾರೆ. ನಮ್ಮ ದೇಶದ ಯುವ ಜನಸಂಖ್ಯಾ ಲಾಭದ ಪ್ರಯೋಜನವನ್ನು ಮಾಗಿಸುವ ಅಭಿಲಾಷೆ ಹೊಂದಿದ್ದಾರೆ. ಅದಾಗ್ಯೂ ಈಗ್ತು ಜನ ಸಮುದಾಯವನ್ನು ಉತ್ಪಾದನೆ ಹಾಗೂ ಸೇವಾ ವಲಯಕ್ಕೆ ಸೀಮಿತಗೊಳಿಸುವ ಅದರಲ್ಲೂ ಮುಖ್ಯವಾಗಿ ಕಾರ್ಮಿಕ ಮಟ್ಟದಲ್ಲೇ ಉಳಿಸುವಂತೆ ಕಾಣುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆ ಕುರಿತಂತೆ ನೀಡಿರುವ ಪ್ರಮುಖ ಹೇಳಿಕೆಗಳನ್ನು ಗಮನಿಸಿದರೆ, ಕೈಗಾರಿಕೆ ಅಥವಾ ಉದ್ದಿಮೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದು ಬಿಜೆಪಿ ಸರಕಾರದ ಯೋಚನೆ. ಕೌಶಲ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು ಅಗ್ಗದ ಕಾರ್ಮಿಕ ವರ್ಗವನ್ನು ಸೃಷ್ಟಿಸುವ ಪ್ರಯತ್ನ. ಈ ಮೂಲಕ ಕಾರ್ಪೊರೇಟ್ ಜಗತ್ತು ಭಾರತದಲ್ಲಿ ವಿಸ್ತರಣೆ ಯೋಜನೆಗಳನ್ನು ಕೈಗೊಳ್ಳುವಂತೆ ಮಾಡುವುದು. ಇದಕ್ಕೆ ಪೂರಕವಾಗಿ ಪ್ರಸ್ತಾವಿತ ಕಾರ್ಮಿಕ ಸುಧಾರಣೆ ನೀತಿಯೂ ಬರಲಿದೆ. ಕಂಪೆನಿಗಳು ತಮ್ಮ ಇಚ್ಛೆಯಂತೆ ಸುಲಭವಾಗಿ ಕಾರ್ಮಿಕರನ್ನು ಪಡೆಯುವ ಹಾಗೂ ಹೊರಹಾಕಲು ಅವಕಾಶ ಮಾಡಿಕೊಡುವುದು ಇದರ ಉದ್ದೇಶ. ಮನಸ್ಸಿಗೆ ಬಂದಂತೆ ವೇತನ ನೀಡಲು ಇದು ಅನುವು ಮಾಡಿಕೊಡಲಿದೆ. ಆದರೆ ಕಾರ್ಮಿಕ ಆಡಳಿತದಲ್ಲಿ ಕೆಂಪುಪಟ್ಟಿಯ ಕೈವಾಡವನ್ನು ಕಡಿಮೆ ಮಾಡುವುದು ಇದರ ಉದ್ದೇಶ ಎನ್ನುವುದು ಸರಕಾರದ ಸಮರ್ಥನೆ. ಆದರೆ ವಾಸ್ತವವೆಂದರೆ ಕಾರ್ಮಿಕ ಸುಧಾರಣೆಯ ಮೂಲ ಉದ್ದೇಶ, ವ್ಯಾಪಾರ ವಹಿವಾಟಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಹೆಸರಿನಲ್ಲಿ ಕಾರ್ಮಿಕ ಶೋಷಣೆ. ನವ ಉದಾರವಾದಿ ಕಾರ್ಯಸೂಚಿಯನ್ನು ಮುಂದುವರಿಸುವ ಸಲುವಾಗಿ, ಕಾರ್ಮಿಕರಿಂದ ಹೆಚ್ಚಿನ ಶ್ರಮವನ್ನು ಪಡೆಯುವ ಸಲುವಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರಕಾರದ ಮುಖ್ಯ ಉದ್ದೇಶ ಬಂಡವಾಳವರ್ಗಕ್ಕೆ ಅನುಕೂಲ ಕಲ್ಪಿಸುವುದಾಗಿದ್ದರೆ, ದೇಶದ ಯುವಶಕ್ತಿಗಳಿಗೆ ಶಿಕ್ಷಣ ನೀಡುವ ಮೂಲಕ ಏಕೆ ತನ್ನ ಸಂಪನ್ಮೂಲವನ್ನು ವ್ಯರ್ಥಗೊಳಿಸಬೇಕು?
ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಆಡಂ ಸ್ಮಿತ್ ಹೇಳುವಂತೆ, ಕಾರ್ಮಿಕರ ಹಿತಾಸಕ್ತಿಗಳು ಕಟ್ಟುನಿಟ್ಟಾಗಿ ಸಮಾಜದ ಜತೆಗೆ ಸಂಪರ್ಕ ಹೊಂದಿದ್ದರೂ, ಆ ಹಿತಾಸಕ್ತಿಗಳನ್ನು ಗ್ರಹಿಸುವಲ್ಲಿ ಆತ ಅಸಮರ್ಥ; ಅಥವಾ ತನ್ನ ಜತೆಗೆ ಅದು ಹೊಂದಿರುವ ಸಂಬಂಧವನ್ನೂ ಅರ್ಥ ಮಾಡಿಕೊಳ್ಳಲಾರ. ಆತನ ಸ್ಥಿತಿ ಹೇಗಿದೆ ಎಂದರೆ, ಅಗತ್ಯ ಮಾಹಿತಿ ಪಡೆಯಲು ಆತನಿಗೆ ಸಮಯಾವಕಾಶ ಇಲ್ಲ. ಒಂದು ವೇಳೆ ಅಂಥ ಮಾಹಿತಿ ಸಿಕ್ಕಿದರೂ ಅದನ್ನು ತೀರ್ಮಾನಿಸಲು ಅಗತ್ಯವಾದ ಶಿಕ್ಷಣ ಹಾಗೂ ಪ್ರವೃತ್ತಿ ಆತನಲ್ಲಿಲ್ಲ. ಕೌಶಲ ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಇದನ್ನೇ ಮಾಡುತ್ತಿದೆ. ಮೇಕ್ ಇನ್ ಇಂಡಿಯಾದ ಮುಖ್ಯ ಉದ್ದೇಶವೇ ಬಾಹ್ಯ ಜಗತ್ತನ್ನು ಮತ್ತು ಅನ್ಯಾಯವನ್ನು ಅರ್ಥಮಾಡಿಕೊಳ್ಳಲು ಅಸಮರ್ಥವಾದ ದೊಡ್ಡ ಪ್ರಮಾಣದ ಕಾರ್ಮಿಕ ವರ್ಗದ ಸೃಷ್ಟಿ. ಗುಣಮಟ್ಟದ ಶಿಕ್ಷಣ ಬೌದ್ಧಿಕ ಬೆಳವಣಿಗೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಸಹಕಾರಿಯಾಗುತ್ತದೆ ಎನ್ನುವ ವಾಸ್ತವ ಬಿಜೆಪಿ ಹಾಗೂ ಸಹಸಂಸ್ಥೆಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಶಿಕ್ಷಣದ ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣದ ಮುಖ್ಯ ಉದ್ದೇಶ, ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು. ಆದರೆ ಯಾವ ಸರಕಾರ ಕೂಡಾ, ಅದರಲ್ಲೂ ಮುಖ್ಯವಾಗಿ ಅಧಕ್ಷ, ಕೋಮುವಾದಿ ಹಾಗೂ ನೀಡಲು ಪೊಳ್ಳು ಭರವಸೆಗಳನ್ನು ಹೊಂದಿರುವುದನ್ನು ಬಿಟ್ಟರೆ ಬೇರೇನೂ ಇಲ್ಲದ ಸರಕಾರಗಳು ಇಂತಹ ಪ್ರಶ್ನಿಸುವ ಮನೋಭಾವ ಬೆಳೆಸಲು ಇಚ್ಛಿಸುವುದಿಲ್ಲ. ಆದ್ದರಿಂದ ಶೈಕ್ಷಣಿಕ ಕ್ಯಾಂಪಸ್‌ಗಳನ್ನು ನಿಯಂತ್ರಿಸುವ ಬಿಜೆಪಿ ಹುನ್ನಾರ ಯೋಜಿತ ಹಾಗೂ ಪ್ರಶ್ನಿಸುವ ಕಲೆಯನ್ನು ಹೊಸಕಿ ಹಾಕುವ ವ್ಯವಸ್ಥಿತ ಸಂಚು. ಈ ಪ್ರಯತ್ನ ಯಾಕಾಗಿ ಹಾಗೂ ಇದರಿಂದ ಯಾರು ಲಾಭ ಪಡೆಯುತ್ತಾರೆ ಎನ್ನುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ.
ಭಾರತಕ್ಕೆ ಇಂದು ಬೇಕಿರುವುದು ಜ್ಞಾನ ಆರ್ಥಿಕತೆಯ ಬೇಡಿಕೆಯನ್ನು ಪೂರೈಸುವ ಉತ್ತಮ ಶಿಕ್ಷಣ ವ್ಯವಸ್ಥೆ. ಅಭಿವೃದ್ಧಿ ಹೆಸರಿನಲ್ಲಿ ನಮ್ಮ ದೇಶದ ಯುವಶಕ್ತಿ ವ್ಯರ್ಥವಾಗಲು ಅವಕಾಶ ನೀಡಬಾರದು. ಇದರಲ್ಲಿ ಬಹುತೇಕ ಯುವಕರು ಬಡ ಹಾಗೂ ಮಧ್ಯಮ ವರ್ಗದವರು. ಉತ್ತಮ ಶಿಕ್ಷಣ ವ್ಯವಸ್ಥೆ ಈ ಯುವಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಏಣಿ ಏರಲು ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾದ ಮಾಧ್ಯಮಿಕ ಶಿಕ್ಷಣಕ್ಕೆ ಸೇರಲು ಅವಕಾಶ ನೀಡಬೇಕು. ಇತಿಹಾಸದಿಂದ ತಿಳಿದು ಬರುವ ಅಂಶವೆಂದರೆ ಉಳ್ಳವರ ವರ್ಗ ತಮಗೆ ಬೇಕಾದಂತೆ ಬಡವರನ್ನು ನಿರ್ದಿಷ್ಟ ಪರಿಧಿಗೆ ಸೀಮಿತಗೊಳಿಸಿತು. ಬಡತನದಿಂದ ಮೇಲೆತ್ತಲು ಅಸ್ತ್ರ ಎಂದು ಪರಿಗಣಿಸಲಾದ ಶಿಕ್ಷಣವನ್ನು ಪಡೆಯದಂತೆ ಮಾಡುವುದು ಅದನ್ನು ನಿರ್ಬಂಧಿಸುವ ಉತ್ತಮ ಮಾರ್ಗ. ಉತ್ತಮ ಶೈಕ್ಷಣಿಕ ಅವಕಾಶಗಳು ಸೃಷ್ಟಿಯಾದಾಗ ಮಾತ್ರ ಸಾಮಾಜಿಕ ಚಲನೆ ಸಾಧ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕಲ್ಯಾಣ ಸರಕಾರ, ಇಂತಹ ವರ್ಗದ ಉನ್ನತ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಬಾರದು.
ಮೇಕ್ ಇನ್ ಇಂಡಿಯಾ ಎಷ್ಟು ಪ್ರಯೋಜನಕಾರಿ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು. ಅದಾಗ್ಯೂ ಯುವಶಕ್ತಿಯ ಪ್ರಯೋಜನದ ಫಲವನ್ನು ನಾವು ಪಡೆಯಬೇಕಾದರೆ, ನಮ್ಮ ಯುವಶಕ್ತಿಗೆ ಶಿಕ್ಷಣ ನೀಡುವ ಅನಿವಾರ್ಯತೆ ಇದೆ. ಶಿಕ್ಷಣದ ಮೂಲಕವಷ್ಟೇ ಅವರು, 21ನೆ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಇರುವ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯ. ಇದು ಸಾಧ್ಯವಾಗಬೇಕಾದರೆ ನಾವು ದೊಡ್ಡ ಸಂಖ್ಯೆಯ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ಕಲಾವಿದರು, ಕ್ರೀಡಾಪಟುಗಳು, ಸಮಾಜ ವಿಜ್ಞಾನಿಗಳನ್ನು ನಾವು ಸೃಷ್ಟಿಸಬೇಕು. ಕೇವಲ ಕೌಶಲ ಅಭಿವೃದ್ಧಿ ಈ ನಿಟ್ಟಿನಲ್ಲಿ ಸಹಕಾರಿಯಾಗದು. ಸುಧಾರಣೆಗಳ ಹೆಸರಿನಲ್ಲಿ, ಸರಕಾರ ತನ್ನ ಕಾರ್ಯಸೂಚಿಯನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಅನುಷ್ಠಾನಗೊಳಿಸುವ ಹುನ್ನಾರ ನಡೆಸಿದೆ. ನಮಗೆ ನಿಜವಾಗಿಯೂ ಅಚ್ಛೇ ದಿನ್ ಬಗ್ಗೆ ಕಾಳಜಿ ಇದ್ದರೆ, ನಮ್ಮ ಯುವ ಸಮುದಾಯ, ಮೇಕ್ ಇನ್ ಇಂಡಿಯಾದ ಕಳಪೆ ಆಧಿಪತ್ಯ ಬೆಳೆಯಲು ಅವಕಾಶ ನೀಡಬಾರದು.
ಕೃಪೆ: ಇಟ್ಠ್ಞಠಿಛ್ಟ್ಚ್ಠ್ಟ್ಟಿಛ್ಞಿಠಿ.ಟ್ಟಜ