ಕೆಲಸ ಕೊಡಿಸುವ ನೆಪದಲ್ಲಿ ಜೀತದಾಳಾಗಿದ್ದ ಯುವತಿಯ ರಕ್ಷಣೆ
ದೂರು ದಾಖಲಿಸಿಕೊಳ್ಳದ ಪೊಲೀಸರು
ಬೆಂಗಳೂರು, ಮಾ.15: ಯುವತಿಗೆ ಕೆಲಸ ಕೊಡಿಸಲಾಗುವುದೆಂದು ನಂಬಿಸಿ ತಾಯಿಗೆ ಮುಂಗಡ ಹಣ ನೀಡಿ ಮನೆಯಿಂದ ಕರೆತಂದು ಜೀತದಾಳಾಗಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿಯನ್ನು ರಕ್ಷಿಸುವಲ್ಲಿ ಇಲ್ಲಿನ ಜಿ.ಎಂ.ಪಾಳ್ಯದ ಸ್ತ್ರೀ ಜಾಗೃತಿ ಸಮಿತಿ ಸದಸ್ಯರು ಯಶಸ್ವಿಯಾಗಿದ್ದಾರೆ. ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯೆ ಗೀತಾ ಮೆನನ್, ದೇಶದಲ್ಲಿ ಮಾನವ ಕಳ್ಳ ಸಾಗಣೆ ಹೆಚ್ಚಾಗುತ್ತಿದೆ. ಹಣದ ಆಮಿಷವೊಡ್ಡಿ ಗ್ರಾಮೀಣ ಪ್ರದೇಶದ ಅಮಾಯಕ ಹೆಣ್ಣು ಮಕ್ಕಳನ್ನು ನಗರಗಳಿಗೆ ಸಾಗಣೆ ಮಾಡುತ್ತಿದ್ದಾರೆ ಎಂದು ದೂರಿದರು.
ನಗರದ ಜಿ.ಎಂ.ಪಾಳ್ಯದ ಮನೆಯೊಂದರಲ್ಲಿ ಯುವತಿಯನ್ನು ಬಲವಂತವಾಗಿ ಕೆಲಸಕ್ಕಿರಿಸಿಕೊಂಡಿದ್ದು ಅವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ನೀಡಿದ್ದಾರೆ. ಅವಳನ್ನು ರಕ್ಷಿಸಿದ ಮೇಲೆ ಮನೆಯ ಯಜಮಾನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ನಮ್ಮನ್ನು ರಕ್ಷಿಸಬೇಕಾದ ಪೊಲೀಸರೇ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯು ನೀಡಿದ ದೂರನ್ನು 3-4 ದಿನಗಳ ಕಾಲ ದಾಖಲಿಸಿಕೊಳ್ಳಲು ಮುಂದಾಗಲಿಲ್ಲ ಎಂದು ಮೆನನ್ ದೂರಿದರು.
ಪದೇ ಪದೇ ಠಾಣೆಗೆ ಹಾಜರಾಗುತ್ತಿದ್ದರಿಂದ ಪೊಲೀಸರು ಯುವತಿಯ ಹೇಳಿಕೆಯನ್ನು ಕೇಳದೆ ದೂರನ್ನು ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದ ಅವರು, ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.
ಜೀತದಿಂದ ವಿಮುಕ್ತಿ ಪಡೆದ ಯುವತಿಯೋರ್ವಳು ಮಾತನಾಡಿ, ಮದನಪಲ್ಲಿಯಿಂದ ತನ್ನನ್ನು 14 ವರ್ಷವಿರುವಾಗಲೇ ಕರೆದುಕೊಂಡು ಬಂದರು. ನಮ್ಮ ತಾಯಿಗೆ 56 ಸಾವಿರ ಮುಂಗಡ ಹಣವನ್ನು ನೀಡಿ ಬೆಂಗಳೂರಿನ ಒಬ್ಬರ ಮನೆಯಲ್ಲಿ ದುಡಿಯಲು ಕಳುಹಿಸಿದರು. ದಿನನಿತ್ಯ ಕಿರುಕುಳಗಳ ಮಧ್ಯೆ 5 ವರ್ಷಗಳ ಕಾಲ ಕೆಲಸ ಮಾಡಿದೆ ಎಂದು ಹೇಳಿದಳು.
ಕಿರುಕುಳದಿಂದ ಬೇಸತ್ತು ಕೆಲಸ ಬಿಟ್ಟು ಮನೆಗೆ ಹೋಗುತ್ತೇನೆ ಎಂದು ಹೇಳಿದರೆ, ನಿನ್ನ ಮೇಲೆ ಕಳ್ಳತನದ ಕೇಸು ಹಾಕಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ತನ್ನನ್ನು ಹೊರಗಡೆಗೆ ಬಿಡದೆ ಮನೆಯಲ್ಲಿ ಕೂಡಿ ಹಾಕಲಾಗಿತ್ತು ಹಾಗೂ ಮೈಮೇಲಿನ ಬಟ್ಟೆಗಳನ್ನು ಹರಿದು ಫೋಟೋ ತೆಗೆಯುತ್ತಿದ್ದರು ಎಂದು ಅಮಾನುಷ ಘಟನೆಯನ್ನು ಬಿಚ್ಚಿಟ್ಟಳು.
ಶೋಷಿತ ವರ್ಗದಿಂದ ಬಂದ ತಮ್ಮ ಅಮ್ಮ ನಮ್ಮೂರಿನಲ್ಲಿ ಅದೇ ರೆಡ್ಡಿಗಳ ಸಂಬಂಧಿಕರ ಮನೆಯಲ್ಲಿ ದುಡಿಯುತ್ತಿದ್ದಳು. ತಪ್ಪು ಮಾಡದೇ ಇದ್ದರೂ ಅಮ್ಮನಿಗಾಗಿ ಸುಮ್ಮನಿದ್ದೆ ಎಂದು ಅಳಲು ತೋಡಿಕೊಂಡ ಆಕೆ, ಕಿರುಕುಳದ ವಿಷಯವನ್ನ್ನು ಪೊಲೀಸರಿಗೆ ತಿಳಿಸಿ ತನಗೆ ನ್ಯಾಯ ಕೊಡಿ ಎಂದು ಕೇಳಿದರೆ ಪೊಲೀಸರು ಕನಿಷ್ಠ ದೂರನ್ನು ಕೂಡ ದಾಖಲಿಸಿಕೊಳ್ಳಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.





