ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೃಷಿ ಕೂಲಿಕಾರರ ವಿಧಾನ ಸೌಧ ಚಲೋ

ಬೆಂಗಳೂರು, ಮಾ. 15: ಮಾ.18ರಿಂದ ಆರಂಭಗೊಳ್ಳುವ ಬಜೆಟ್‌ನಲ್ಲಿ ರಾಜ್ಯದ ಕೃಷಿ ಕೂಲಿಕಾರರಿಗೆ ಪುನರ್ವಸತಿ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಇಂದು ನಗರದ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ರಾಜ್ಯದ ಸಾವಿರಾರು ಕೃಷಿ ಕೂಲಿಕಾರರು ವಿಧಾನಸೌಧ ಚಲೋ ಚಳವಳಿ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಕೃಷಿ ಕೂಲಿಕಾರರ ಅಭಿವೃದ್ಧಿಗಾಗಿ ಪುನರ್ವಸತಿ ಪ್ಯಾಕೇಜ್‌ಅನ್ನು ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯ ಸರಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಕೇರಳ, ತಮಿಳುನಾಡು, ತ್ರಿಪುರ ರಾಜ್ಯಗಳ ಮಾದರಿಯಲ್ಲಿ ರಾಜ್ಯದ ಕೃಷಿ ಕೂಲಿಕಾರರಿಗೆ ಕನಿಷ್ಠ ವೇತನ, ತುಟ್ಟಿಭತ್ತೆ, ಪಿಎಫ್, ಇಎಸ್‌ಐ ಸೇರಿದಂತೆ ಇತರೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಕಲ್ಪಿಸಲು ಸಮಗ್ರ ಶಾಸನವೊಂದನ್ನು ಈ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಇತರೆ ಕ್ಷೇತ್ರದ ಕಾರ್ಮಿಕರಿಗೆ ಇರುವ ಕಲ್ಯಾಣ ನಿಧಿಯಂತೆ, ಕೃಷಿ ಕೂಲಿಕಾರರಿಗೆ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು. ಕೃಷಿ ಕೂಲಿಕಾರರಿಗೆ ದಿನವೊಂದಕ್ಕೆ ರೂ.300ರಿಂದ ರೂ.400ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ ಅವರು, ವಸತಿ ರಹಿತ ಕೂಲಿಕಾರರಿಗೆ ಸರಕಾರ ಉಚಿತ ನಿವೇಶನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿ ಕೂಲಿಕಾರರಿಗೆ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಬೇಕು. ಕೃಷಿ ಉಪಕರಣಗಳನ್ನು ಕೊಳ್ಳಲು ಬಡ್ಡಿರಹಿತ ಸಾಲ ನೀಡುವಂತೆ ಸರಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಮತ್ತು ಬಗರ್ ಹುಕುಂ ಸಾಗುವಳಿ ಪ್ರಕರಣಗಳನ್ನು ಸಕ್ರಮಗೊಳಿಸುವ ಕ್ರಮವು ಈ ಬಜೆಟ್‌ನಲ್ಲೇ ಘೋಷಣೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಜಿ.ಎನ್ ನಾಗರಾಜ, ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಭಾಗವಹಿಸಿದರು.





