ಕೃಷಿ ಭೂಮಿ ಪರಿವರ್ತಿಸಲು ಹೈಕೋರ್ಟ್ ಅವಕಾಶ
ಬೆಂಗಳೂರು, ಮಾ.15: ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿನ 20.35 ಎಕರೆ ಜಮೀನನ್ನು ಭೂ ಪರಿವರ್ತನೆ(ಕೃಷಿಯೇತರ)ಗೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಈ ಸಂಬಂಧ ನಿತ್ಯಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ. ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕಲ್ಲುಗೋಪಹಳ್ಳಿ ಸರ್ವೆ ನಂ.21/7ರಲ್ಲಿ 20.35 ಎಕರೆ ಭೂಮಿಯನ್ನು ವ್ಯವಸಾಯೇತರ ಕಾರ್ಯಗಳಾದ ವಾಸ, ಧ್ಯಾನಮಂದಿರ ನಿರ್ಮಾಣ, ಶಾಲೆ ಮತ್ತು ಅತಿಥಿ ಗೃಹ ನಿಮಾರ್ಣದ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿಕೊಡಲು ಆದೇಶಿಸಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಈ ಅರ್ಜಿ ಸಲ್ಲಿಸುವುದಕ್ಕೂ ಮುನ್ನವೇ ಧ್ಯಾನಪೀಠದಲ್ಲಿ ಭೂ ಪರಿವರ್ತನೆಯಾಗದ ಜಾಗದಲ್ಲಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು ಬೆಳಕಿಗೆ ಬಂದಿರುವುದು ಸೇರಿ ಇನ್ನಿತರ ದೂರುಗಳು ಇವರ ವಿರುದ್ಧ ದಾಖಲಾಗಿವೆ. ಹೀಗಾಗಿ, ರಾಮನಗರ ಜಿಲ್ಲಾಧಿಕಾರಿ ಭೂ ಪರಿವರ್ತನೆ ಅವಕಾಶ ನೀಡಿರಲಿಲ್ಲ ಎಂದು ಪ್ರತಿವಾದಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.





