ಬಳೆಪೇಟೆಯ ಹಳೆ ಕಟ್ಟಡ ಕುಸಿತ

ಬೆಂಗಳೂರು, ಮಾ. 15: ಇಲ್ಲಿನ ಬಳೆಪೇಟೆ ವೃತ್ತದಲ್ಲಿ ಎರಡು ಅಂತಸ್ತಿನ ಹಳೆ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 1:30ರ ವೇಳೆಗೆ ಬಳೆಪೇಟೆ ವೃತ್ತದಲ್ಲಿದ್ದ ಎರಡು ಅಂತಸ್ತಿನ ಹಳೆ ಕಟ್ಟಡ ಶಿಥಿಲ ಸ್ಥಿತಿಯಲ್ಲಿತ್ತು. ಸಾರ್ವಜನಿಕರ ಸಮ್ಮುಖದಲ್ಲೇ ಕಟ್ಟಡ ಕುಸಿದಿದ್ದು, ಕುಸಿದ ಈ ಕಟ್ಟಡದಲ್ಲಿ ಎರಡು ಅಂಗಡಿ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದವು ಎನ್ನಲಾಗಿದೆ. ಒಂದು ಮಳಿಗೆಯಲ್ಲಿ ಮೊಬೈಲ್ ಅಂಗಡಿ ಮತ್ತೊಂದರಲ್ಲಿ ಸಿಹಿ ತಿಂಡಿ ಅಂಗಡಿಗಳಿದ್ದವು ಎಂದು ಹೇಳಲಾಗುತ್ತಿದ್ದು, ಕಟ್ಟಡ ಅಲುಗಾಡಲು ಶುರುವಾದ ಹಿನ್ನೆಲೆಯಲ್ಲಿ ಅಂಗಡಿಯೊಳಗಿದ್ದವರು ಹೊರ ಬಂದಿದ್ದಾರೆ. ಅನಂತರ ಕಟ್ಟಡ ಕುಸಿಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಖಾಸಗಿ ಕಟ್ಟಡ 60 ವರ್ಷದಷ್ಟು ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಇದರ ಸನಿಹದಲ್ಲೇ ಮತ್ತೆರಡು ಹಳೆಯ ಕಟ್ಟಡವಿದ್ದು, ಅದರಲ್ಲಿ ಸಾಕಷ್ಟು ಅಂಗಡಿಗಳಿವೆ. ಅದು ಕೂಡ ಕುಸಿಯುವ ಸಂಭವವಿದ್ದು, ಅಲ್ಲಿನ ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.





