ತೃಣಮೂಲ ಶಾಸಕರು ಲಂಚ ಪಡೆಯುತ್ತಿರುವ ವೀಡಿಯೊ ಬಹಿರಂಗ
ಸಂಸತ್ತಿನಲ್ಲಿ ಗದ್ದಲ

ಹೊಸದಿಲ್ಲಿ, ಮಾ.15: ಪಶ್ಚಿಮ ಬಂಗಾಳದ ಆಳುವ ತೃಣಮೂಲ ಕಾಂಗ್ರೆಸ್‌ನ ಸಚಿವರು ಹಾಗೂ ಶಾಸಕರು ಲಂಚ ಪಡೆಯುತ್ತಿರುವ ರಹಸ್ಯ ಕಾರ್ಯಾಚರಣೆಯ ವೀಡಿಯೊ ಒಂದು ಬಹಿರಂಗವಾಗಿದ್ದು, ಇಂದು ಸಂಸತ್ತಿನಲ್ಲಿ ಘರ್ಷಣೆಗೆ ಕಾರಣವಾಗಿದೆ. ಆಳುವ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಏಕ ಕಂಠದಿಂದ ತನಿಖೆಯೊಂದಕ್ಕೆ ಆಗ್ರಹಿಸಿವೆ.
ಈ ಕುರಿತು 10 ಬೆಳವಣಿಗೆಗಳು ಈ ಮುಂದಿವೆ:
ನಾರದ ನ್ಯೂಸ್ ಡಾಟ್ ಕಾಂನ ವೀಡಿಯೊದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಶ್ಚಿಮ ಬಂಗಾಳದ ಏಕೈಕ ಬಿಜೆಪಿ ಸಂಸದ ಎಸ್.ಎಸ್.ಅಹ್ಲುವಾಲಿಯ ಆಗ್ರಹಿಸಿದರು.
ಅವರ ಈ ಆಗ್ರಹವನ್ನು ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಪ್ರತಿಧ್ವನಿಸಿದ್ದು, ಶಾರದಾದಿಂದ ನಾರದವರೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೂಟಿಯಲ್ಲಿ ತೊಡಗಿದೆ. ಸಂಸತ್ತಿನ ಘನತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆಯೆಂದು ಆರೋಪಿಸಿದರು.
ಟಿಎಂಸಿ ಸಂಸದ ಸುಗತ ರಾಯ್, ರಹಸ್ಯ ಕಾರ್ಯಾಚರಣೆಯನ್ನು ಬಂಗಾಳ ಚುನಾವಣೆಗೆ ಮುನ್ನ ತನ್ನ ಪಕ್ಷದ ವಿರುದ್ಧ ನಡೆಸಿರುವ ಪಿತೂರಿಯ ಉತ್ಪನ್ನ ಎಂದು ಕರೆದರು.
ವಿಧಾನಸಭಾ ಚುನಾವಣೆಗೆ ಒಂದು ತಿಂಗಳಿಗೂ ಕಡಿಮೆ ದಿನಗಳಿರುವಂತೆಯೇ ಈ ರಹಸ್ಯ ಕಾರ್ಯಾಚರಣೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ತೀವ್ರ ಆಘಾತ ನೀಡಿದೆ. ವೀಡಿಯೊದಲ್ಲಿ ಕನಿಷ್ಠ ಮೂವರು ಸಚಿವರು ಹಾಗೂ ಕೆಲವು ಶಾಸಕರು ಹಣ ಪಡೆಯುತ್ತಿರುವ ದೃಶ್ಯವಿದೆ. ಅವರಿಗೆಲ್ಲ ತಲಾ ರೂ.5ಲಕ್ಷ ನೀಡಲಾಗಿದೆ ಎನ್ನಲಾಗಿದೆ. ಸಭೆಗಳು ಹಾಗೂ ಸಂಪರ್ಕಗಳು ಮೂಲಕ ಖಾಸಗಿ ಕಂಪೆನಿಯೊಂದಕ್ಕೆ ಸಹಾಯ ಮಾಡಲು ಅವರು, ಈ ಲಂಚವನ್ನು ಪಡೆದಿದ್ದಾರೆಂದು ಹೇಳಲಾಗಿದೆ.
‘ತೆಹಲ್ಕಾ’ ಮ್ಯಾಗಜೀನ್‌ನ ಮಾಜಿ ಉದ್ಯೋಗಿ ಎನ್ನಲಾಗಿರುವ ಮಾಥ್ಯೂ ಸಾಮ್ಯೂಯೆಲ್ ಎಂಬವರ ಸಂಚಾಲಕತ್ವದ ‘ನಾರದ ನ್ಯೂಸ್’ ಪೋರ್ಟಲ್ ಈ ರಹಸ್ಯ ಕಾರ್ಯಾಚರಣೆ ನಡೆಸಿದೆ.
ಕಳೆದ ಎರಡು ವರ್ಷಗಳಿಂದ ತಾನೀ ರಹಸ್ಯ ಕಾರ್ಯಾಚರಣೆ ದಾಖಲಿಸಿದ್ದೇನೆ. ತನ್ನ ಪತ್ರಕರ್ತರು ನಕಲಿ ಕಂಪೆನಿಯೊಂದರ ಪ್ರತಿನಿಧಿಗಳಂತೆ ನಟಿಸಿ ರಾಜಕಾರಣಿಗಳ ಬಳಿಗೆ ಹೋಗಿದ್ದರೆಂದು ಪೋರ್ಟಲ್ ಪ್ರತಿಪಾದಿಸಿದೆ.
ಎನ್‌ಡಿಟಿವಿಯಿಂದ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದ ಈ ವೀಡಿಯೊದಲ್ಲಿ, ಅಂತಹ ಲಾಬಿಗಾಗಿ ಸಚಿವರು ಹಾಗೂ ಐವರು ಶಾಸಕರು ಹಣ ಪಡೆಯುತ್ತಿರುವುದು ದಾಖಲಾಗಿದೆ. ಕೋಲ್ಕತಾದ ಮೇಯರ್ ಸಹಿತ ರಾಜಕಾರಣಿಗಳಿಗೆ ರೂ.70 ಲಕ್ಷಕ್ಕೂ ಹೆಚ್ಚು ಹಣವನ್ನು ಹಂಚಲಾಗಿದೆ.
ನಿನ್ನೆ ಉತ್ತರ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತ, ವಿಪಕ್ಷಗಳು ತನ್ನ ವಿರುದ್ಧ ರಾಜಕೀಯವಾಗಿ ಹೋರಾಡಬೇಕೇ ಹೊರತು ಇಂತಹ ಪಿತೂರಿಯ ಮೂಲಕವಲ್ಲ ಎಂದಿದ್ದಾರೆ.
ವೀಡಿಯೊ ಹೇಳಿಕೆಯೊಂದರಲ್ಲಿ ಟಿಎಂಸಿ ಶಾಸಕ ಹಾಗೂ ವಕ್ತಾರ ದೆರೆಕ್ ಒಬ್ರಿಯಾನ್ ಪೋರ್ಟಲ್‌ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ. ತಾವು ಸಂಪೂರ್ಣ ಪಾರದರ್ಶಕವಾಗಿದ್ದೇವೆ. ಮಮತಾದೀಯವರ ಪ್ರಾಮಾಣಿಕ ಪ್ರಶ್ನಾತೀತವಾದುದು. ಅದನ್ನು ಬಂಗಾಳದ ಜನ ತಿಳಿದಿದ್ದಾರೆ. ತಾವೀಗ ಚುನಾವಣೆಯಲ್ಲಿ ವ್ಯಸ್ತರಾಗಿದ್ದೇವೆ. ಆದುದರಿಂದ ಈ ಸುಳ್ಳು ಅಭಿಯಾನದಲ್ಲಿ ಯಾರೆಲ್ಲ ಇದ್ದಾರೋ ಅವರು ಕೃತಕ ವಿಡಿಯೊದೊಂದಿಗೆ ಅದನ್ನು ಮುಂದುವರಿಸಲಿ ಎಂದವರು ಸವಾಲು ಹಾಕಿದ್ದಾರೆ.







