ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ: ಮೇಯರ್
ಹಲಸೂರು ಕೆರೆ ಮೀನುಗಳ ಮಾರಣಹೋಮ

ಬೆಂಗಳೂರು, ಮಾ. 15: ಹಲಸೂರು ಕೆರೆಯ ಮೀನುಗಳ ಸಾವನ್ನು ತಡೆಗಟ್ಟಲು ವಿಫಲರಾದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಮಂಜುನಾಥ್‌ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಹಲಸೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಸೂರು ಕೆರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಮೀನುಗಳು ಸತ್ತಿವೆ. ಇದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಮೀನುಗಾರಿಕೆ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಮೀನುಗಳ ಮಾರಣಹೋಮದ ಘಟನೆಯನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಹಲಸೂರು ಕೆರೆಯ ಅಭಿವೃದ್ಧಿ ಹಾಗೂ ನೀರು ಶುದ್ಧೀಕರಣಕ್ಕೆ ಪಾಲಿಕೆ ಕೋಟ್ಯಂತರ ರೂ. ವೆಚ್ಚ ಮಾಡಿ ಸಾರ್ವಜನಿಕರಿಗೆ ಉತ್ತಮ ಪರಿಸರ ಕಲ್ಪಿಸಿಕೊಡಲು ಪ್ರಯತ್ನಿಸುತ್ತಿದೆ ಎಂದರು.
ಪಾಲಿಕೆಯಿಂದಲೇ ಟೆಂಡರ್: ಗುತ್ತಿಗೆ ನೀಡುವ ಮೊದಲು ಮೀನುಗಾರಿಕೆ ಇಲಾಖೆ ಆಮ್ಲಜನಕ ಪ್ರಮಾಣ, ನೀರಿನ ಪರೀಕ್ಷೆ ನಡೆಸಿ ಮೀನುಗಾರಿಕೆಗೆ ಅನುಮತಿ ನೀಡಬೇಕು. ಆದರೆ ಇವುಗಳನ್ನು ಪಾಲಿಸದೆ ಇರುವುದರಿಂದಲೇ ಅನಾಹುತ ಸಂಭಸುತ್ತಿವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇರುವುದರಿಂದ ಇನ್ನು ಮುಂದೆ ಬಿಬಿಎಂಪಿ ಕೆರೆಗಳಲ್ಲಿ ಮೀನು ಸಾಕಣೆ ಗುತ್ತಿಗೆಯನ್ನು ಮೀನುಗಾರಿಕೆ ಇಲಾಖೆಗೆ ವಹಿಸದೆ ಪಾಲಿಕೆಯಿಂದಲೇ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಸಚಿವರಾದ ರೋಷನ್‌ಬೇಗ್ ಮಾತನಾಡಿ, ಮೀನು ಸಾಕಣೆಗೆ ಟೆಂಡರ್ ತೆಗೆದುಕೊಂಡಾಗ ಕೆರೆಯಲ್ಲಿ ಆಮ್ಲಜನಕದ ಪ್ರಮಾಣವನ್ನು ಸರಿಯಾಗಿ ಇರುವಂತೆ ಕಾಪಾಡಿಕೊಳ್ಳಬೇಕಿತ್ತು ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಘಟನೆಯ ಬಗ್ಗೆ ಸಮಗ್ರವಾಗಿ ವಿವರ ನೀಡುವುದಾಗಿ ತಿಳಿಸಿದರು. ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ತ್ಯಾಜ್ಯ ನೀರು ಸಂರಕ್ಷಣಾ ಘಟಕ ಸ್ಥಾಪನೆಗೆ 4 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗಿದೆ. ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡುವುದರಿಂದ ಮೀನುಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಹೇಮಲತಾ, ಆಡಳಿತ ಪಕ್ಷದ ನಾಯಕ ಆರ್.ಎಸ್.ಸತ್ಯನಾರಾಯಣ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯದ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಹಲಸೂರು ಕೆರೆಯನ್ನು ಅಭಿವೃದ್ಧಿ ಪಡಿಸುವುದು ನಮ್ಮ ಕರ್ತವ್ಯ. ಹಾಗಾಗಿ ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶೀಘ್ರದಲ್ಲೇ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಲಾಗುವುದು. -ಮಂಜುನಾಥ್‌ರೆಡ್ಡಿ, ಮೇಯರ್







