ಎಸ್ಸಿ, ಎಸ್ಟಿ ವಕೀಲರಿಗೆ ತಲಾ 1 ಲಕ್ಷ ರೂ. ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.15: ಎಸ್ಸಿ ಮತ್ತು ಎಸ್ಟಿ ವಕೀಲರಿಗೆ ಕಾನೂನು ಪುಸ್ತಕಗಳನ್ನು ಕೊಂಡುಕೊಳ್ಳಲು ಬಿಬಿಎಂಪಿ ಮೀಸಲಿಟ್ಟ ಹಣದಿಂದ ತಲಾ 1 ಲಕ್ಷ ರೂ.ನೀಡಲು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ. ಈ ಸಂಬಂಧ ಸುರೇಶ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಎಸ್ಸಿ ಮತ್ತು ಎಸ್ಟಿ ವಕೀಲರಿಗೆ ಕಾನೂನಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಕೊಂಡುಕೊಳ್ಳಲು 4.46 ಕೋಟಿ ರೂ. ಬಿಬಿಎಂಪಿ ಮೀಸಲಿಟ್ಟಿತ್ತು. ಆ ಹಣವನ್ನು ಕಳೆದ ಬಿಜೆಪಿ ಸರಕಾರ ಸಾಧನಾ ಸಮಾವೇಶಕ್ಕಾಗಿ ಬಳಸಿಕೊಂಡು ವಕೀಲರಿಗೆ ಅನ್ಯಾಯ ಎಸಗಿತ್ತು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಆರ್‌ಟಿಐಗೆ ಅರ್ಜಿ ಸಲ್ಲಿಸಿ ಎಸ್ಸಿ ಮತ್ತು ಎಸ್ಟಿ ವಕೀಲರಿಗೆ ಮೀಸಲಿಟ್ಟ ಹಣದ ಬಗ್ಗೆ ಪ್ರಶ್ನಿಸಿದಾಗ ಕಳೆದ ಬಿಜೆಪಿ ಸರಕಾರ ತಮ್ಮ ಸರಕಾರದ ಸಾಧನಾ ಸಮಾವೇಶಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ‘ಎಸ್ಸಿ ಮತ್ತು ಎಸ್ಟಿ’ ಪ್ರತಿ ವಕೀಲನಿಗೆ 1 ಲಕ್ಷ ರೂ.ಗಳನ್ನು ಕಾನೂನು ಪುಸ್ತಕಗಳನ್ನು ಕೊಂಡುಕೊಳ್ಳಲು ನೀಡಬೇಕೆಂದು ನಿರ್ದೇಶನ ನೀಡಿತು.





