ಹಂತಕ ಅಸಾರಾಂ ಬಾಪು ಶಿಷ್ಯ ಶಾರ್ಪ್ ಶೂಟರ್ ಹಲ್ದಾರ್ ಸೆರೆ
ರಾಯಪುರ, ಮಾ.15: ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಗಳ ಮೂರು ಪ್ರಮುಖ ಸಾಕ್ಷಿಗಳನ್ನು ಗುಂಡಿಕ್ಕಿ ಸಾಯಿಸಿದ ಆರೋಪದ ಮೇಲೆ ಗುಜರಾತಿನ ಭಯೋತ್ಪಾದಕ ನಿಗ್ರಹ ದಳ ಹಾಗೂ ಕ್ರೈಂ ಬ್ರಾಂಚ್ ಪೊಲೀಸರು ಶಾರ್ಪ್ ಶೂಟರ್ ಆಗಿರುವ ಅಸಾರಾಂನ ಅನುಯಾಯಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಕಾರ್ತಿಕ್ ಹಲ್ದಾರ್‌ನನ್ನು ಛತ್ತೀಸ್‌ಗಢದ ರಾಯಪುರದಿಂದ ಸೋಮವಾರ ಬಂಧಿಸಲಾಗಿದೆ.
ಮೂವರನ್ನು ಗುಂಡಿಕ್ಕಿ ಸಾಯಿಸಿದ ಹೊರತಾಗಿ ಅಸಾರಾಮ ಅತ್ಯಾಚಾರ ಪ್ರಕರಣಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆನ್ನಲಾದ ನಾಲ್ವರು ಇತರರನ್ನು ಕೊಲೆಗೈಯ್ಯಲು ಯತ್ನಿಸಿದ ಆರೋಪವೂ ಆತನ ಮೇಲಿದೆ.
ಅಸಾರಾಂನ ಇತರ ಅನುಯಾಯಿಗಳು ತನ್ನನ್ನು ಈ ಕೃತ್ಯಗೈಯ್ಯಲು ಹೇಳಿದರೆಂದು ಹಲ್ದಾರ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ದೇಶದ ವಿವಿಧೆಡೆಗಳಲ್ಲಿರುವ ಅಸಾರಾಂನ ಆಶ್ರಮಗಳಿಂದ ತನಗೆ ಹಣಕಾಸು ಒದಗಿಸಲಾಗಿದೆಯೆಂಬ ಮಾಹಿತಿಯನ್ನೂ ಆತ ಹೊರಗೆಡಹಿದ್ದಾನೆ. ಅಸಾರಾಂನ ಖಾಸಗಿ ವೈದ್ಯ ಅಮೃತ್ ಪ್ರಜಾಪತಿಯನ್ನು ಜೂನ್ 2014ರಲ್ಲಿ, ಆತನ ಸಹಾಯಕ ಹಾಗೂ ಅಡುಗೆಯಾಳು ಅಖಿಲ್ ಗುಪ್ತಾನನ್ನು ಜನವರಿ 2015ರಲ್ಲಿ, ಇನ್ನೊಬ್ಬ ಪ್ರಮುಖ ಸಾಕ್ಷಿ ಕೃಪಾಲ್ ಸಿಂಗ್‌ನನ್ನು ಜುಲೈ 2015ರಂದು ಕೊಂದ ಆರೋಪ ಹಲ್ದಾರ್ ಎದುರಿಸುತ್ತಿದ್ದಾನೆ.
ಆಯುರ್ವೇದ ವೈದ್ಯನಾಗಿದ್ದ ಪ್ರಜಾಪತಿಯನ್ನು ರಾಜ್‌ಕೋಟ್‌ನಲ್ಲಿರುವ ಆತನ ಕ್ಲಿನಿಕ್‌ನಲ್ಲಿ ಕೊಲ್ಲಲಾಗಿತ್ತು. ಈ ವೈದ್ಯ ಅಸಾರಾಂನ ಕುಕೃತ್ಯಗಳನ್ನು ವಿರೋಧಿಸುತ್ತಿದ್ದು, ಅಸಾರಾಂ ವಿರುದ್ಧ ಮೂರು ವರ್ಷಗಳ ಹಿಂದೆ ದಾಖಲಾದ ರೇಪ್ ಪ್ರಕರಣದಲ್ಲಿ ಸಾಕ್ಷಿಯಾಗಿದ್ದನು.
ಹಲ್ದಾರ್ ಮೊದಲಾಗಿ 2000ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಅಸಾರಾಂನ ಧಾರ್ಮಿಕ ಪ್ರವಚನವೊಂದರಲ್ಲಿ ಭಾಗವಹಿಸಿದ ನಂತರ ಆತನಿಂದ ಪ್ರಭಾವಿತನಾಗಿದ್ದ. ಇದಾದ ಒಂದು ವರ್ಷದ ನಂತರ ಆತ ಸಂಸಾರವನ್ನು ತ್ಯಜಿಸಿ ಅಹ್ಮದಾಬಾದ್ ಸಮೀಪದ ಮೊಟೆರಾದಲ್ಲಿರುವ ಅಸಾರಾಂನ ಆಶ್ರಮದಲ್ಲಿ ವಾಸಿಸುತ್ತಿದ್ದ.





