ನಕ್ಸಲ್‌ವಾದದ ಹುಟ್ಟಡಗಿಸಲು ಸರಕಾರದಿಂದ ಆಂದೋಲನ ಮಾದರಿಯಲ್ಲಿ ಕಾರ್ಯಾಚರಣೆ
ಹೊಸದಿಲ್ಲಿ,ಮಾ.15: ನಕ್ಸಲ್‌ವಾದದ ಹುಟ್ಟಡಗಿಸಲು ತಾನು ಆಂದೋಲನದ ಮಾದರಿಯಲ್ಲಿ ಶ್ರಮಿಸುವುದಾಗಿ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ ಸರಕಾರವು,ನಕ್ಸಲ್ ಹಿಂಸಾಚಾರದಲ್ಲಿ ಸಾವುಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ ಎಂದು ಒತ್ತಿ ಹೇಳಿತು.
ಸರಕಾರವು ಜಾರಿಗೊಳಿಸುತ್ತಿರುವ ಬಹು ಆಯಾಮಗಳ ಕಾರ್ಯತಂತ್ರವು ಸಮಸ್ಯೆಯನ್ನು ಬಗೆಹರಿಸುವಲ್ಲಿ ನೆರವಾಗುತ್ತಿದೆ ಮತ್ತು ನಕ್ಸಲ್ ಪೀಡಿತ ರಾಜ್ಯಗಳಿಗೆ ಗರಿಷ್ಠ ಸಾಧ್ಯ ನೆರವನ್ನು ಒದಗಿಸಲಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.
ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು,ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಹಫ್ತಾ ವಸೂಲಿ ಮತ್ತು ಹತ್ಯೆ ಘಟನೆಗಳು ವರದಿಯಾಗಿವೆ ಎಂದರು.
ನಕ್ಸಲ್‌ವಾದವನ್ನು ಎದುರಿಸಲು ಮತ್ತು ಅದಕ್ಕೆ ಅಂತ್ಯ ಹಾಡಲು ಸರಕಾರವು ಆಂದೋಲನದ ಮಾದರಿಯಲ್ಲಿ ಕಾರ್ಯಾಚರಿಸಲಿದೆ ಎಂದು ಸಹಾಯಕ ಗೃಹ ವ್ಯವಹಾರಗಳ ಸಚಿವ ಹರಿಭಾಯಿ ಪಿ.ಚೌಧರಿ ಹೇಳಿದರು.
ಸರಕಾರದ ಕಾರ್ಯತಂತ್ರವು ಫಲಿತಾಂಶವನ್ನು ನೀಡುತ್ತಿದೆ ಎಂದ ಸಿಂಗ್,ನಕ್ಸಲ್ ಮತ್ತು ಮಾವೋವಾದಿಗಳ ಹಿಂಸಾಚಾರದಿಂದಾಗಿ 2010ರಲ್ಲಿ 1,005ರಷ್ಟಿದ್ದ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಸಾವುಗಳ ಸಂಖ್ಯೆ ಕಳೆದ ವರ್ಷ 226ಕ್ಕೆ ಇಳಿದಿದೆ ಎಂದರು.
2015ರಲ್ಲಿ 168 ನಾಗರಿಕರು ಮತ್ತು 58 ಭದ್ರತಾ ಸಿಬ್ಬಂದಿ ನಕ್ಸಲ್ ಹಿಂಸಾಚಾರಕ್ಕೆ ಬಲಿಯಾಗಿದ್ದರೆ,2010ರಲ್ಲಿ 720 ನಾಗರಿಕರು ಮತ್ತು 285 ಭದ್ರತಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದರು ಎಂದರು.





