ಭಾರತದಿಂದ ಮಹಿಳಾ ಸಬಲೀಕರಣದ ರಾಷ್ಟ್ರೀಯ ನೀತಿ ನವೀಕರಣ: ಮೇನಕಾ

ವಿಶ್ವಸಂಸ್ಥೆ, ಮಾ.16: ಭಾರತವು ಲಿಂಗ ಸಮಾನತೆಯನ್ನು ಸಾಧ್ಯವಾಗಿಸುತ್ತಿದೆ ಹಾಗೂ ಮಹಿಳಾ ಸಬಲೀಕರಣದ ತನ್ನ ಬದ್ಧತೆಗೆ ವೇಗ ನೀಡಲು ಗಟ್ಟಿ ತಳಹದಿಯೊಂದನ್ನು ಸ್ಥಾಪಿಸು ವುದಕ್ಕಾಗಿ ರಾಷ್ಟ್ರೀಯ ಮಹಿಳಾ ನೀತಿಯನ್ನು ನವೀಕರಿಸುತ್ತಿದೆ ಯೆಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಲಿಂಗ ಸಮಾನತೆಯನ್ನು ಖಚಿತಪಡಿಸುವುದು, ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಹಾಗೂ ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುವುದು, ಒಳಗೊಂಡ ಸಮಾಜ ಹಾಗೂ ಅಭಿವೃದ್ಧಿಯನ್ನು ಸಾಧಿಸುವ ನಮ್ಮ ರಾಷ್ಟ್ರೀಯ ನಂಬಿಕೆಯಲ್ಲಿ ಅಡಕವಾಗಿದೆಯೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ನಿನ್ನೆ ತಿಳಿಸಿದ್ದಾರೆ.
ನಾವು ಮಹಿಳೆಯರ ಮುನ್ನಡೆಗಾಗಿ ಸಾಧ್ಯವಿರುವ ಕಾಯ್ದೆ ಹಾಗೂ ನೀತಿ ಚೌಕಟ್ಟುಗಳನ್ನು ಅಳವಡಿಸಿಕೊಂಡಿದ್ದೇವೆ. ಸಾಮಾಜಿಕ ಪಕ್ಷಪಾತ ಹಾಗೂ ಏಕತಾನತೆಗಳ ವಿರುದ್ಧ ಹೋರಾಡಲು ಜಾಗೃತಿ ಹಾಗೂ ಮನಸ್ಸಿಗೆ ಸುಲಭವಾಗಿ ಗ್ರಾಹ್ಯವಾಗುವಂತಹ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆಂದು ಮಹಿಳೆಯರ ಸ್ಥಾನಮಾನದ ಕುರಿತ ಆಯೋಗದ (ಸಿಎಸ್‌ಡಬ್ಲು) 60ನೆ ಅಧಿವೇಶನದ ದುಂಡುಮೇಜಿನ ಕಲಾಪವೊಂದರಲ್ಲಿ ಮೇನಕಾ ಹೇಳಿದ್ದಾರೆ. 17 ತಾಳಿಕೆಯ ಅಭಿವೃದ್ಧಿ ಗುರಿಗಳಲ್ಲಿ ಮಾಡಿರುವ ನಮ್ಮ ಬದ್ಧತೆಯ ವೇಗ ವರ್ಧನೆಗಾಗಿ ಗಟ್ಟಿ ತಳಹದಿಯನ್ನು ರಚಿಸಲು ಭಾರತವು ರಾಷ್ಟ್ರೀಯ ಮಹಿಳಾ ನೀತಿಯನ್ನು ನವೀಕರಿಸುತ್ತಿದೆಯೆಂದು ಅವರು ತಿಳಿಸಿದ್ದಾರೆ.
ತಾಳಿಕೆಯ ಅಭಿವೃದ್ದಿಗೆ ಹೊಸ ಜಾಗತಿಕ ಕಾರ್ಯಸೂಚಿಯ ಜಾರಿಯನ್ನು ನಾವು ಆರಂಭಿಸಿರುವಂತೆಯೇ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವನ್ನು ಸಾಕಾರಗೊಳಿಸಲು ಸಾಧ್ಯವಾಗುವ ಸ್ಥಿತಿಯ ಈಗಾಗಲೇ ಭಾರತದಲ್ಲಿದೆಯೆಂದು ಮೇನಕಾ ಹೇಳಿದ್ದಾರೆ.
ನಿನ್ನೆ ಆರಂಭವಾಗಿ ಮಾ.24ರವರೆಗೆ ನಡೆಯಲಿರುವ ಸಿಎಸ್‌ಡಬ್ಲು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಗಳ ಬಗ್ಗೆ ಈ ವರೆಗಿನ ಸಾಧನೆಯನ್ನು ಪರಾಮರ್ಶಿಸಲು ಹಾಗೂ ಹೊಸ ಕ್ರಮಗಳ ಯೋಜನೆ ರೂಪಿಸಲು ವಿಶ್ವಾದ್ಯಂತದಿಂದ ವಿಶ್ವಸಂಸ್ಥೆಯ ವ್ಯವಸ್ಥೆ, ಸದಸ್ಯ ರಾಷಟ್ಗೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಟ್ಟಿಗೆ ಸೇರಿಸಲಿದೆ.
ಸಿಎಸ್‌ಡಬ್ಲುಗಾಗಿ ನಗರದಾದ್ಯಂತ 400ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಮಹಿಳಾ ಸಬಲೀಕರಣ ಹಾಗೂ ತಾಳಿಕೆಯ ಅಭಿವೃದ್ಧಿ ಕಾರ್ಯಕ್ರಮಗಳು ಆದ್ಯ ವಿಷಯವಾಗಿದೆ. 2015ರ ಸೆಪ್ಟಂಬರ್‌ನಲ್ಲಿ 2030 ಕಾರ್ಯಸೂಚಿ ಅಳವಡಿಸಿದ ಬಳಿಕ ಇದು ಆಯೋಗದ ಮೊದಲ ಅಧಿವೇಶನವಾಗಿದೆ.
ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಮಾರ್ಟ್ ಸಿಟೀಸ್ ಹಾಗೂ ಜನಧನ್ ಯೋಜನೆಗಳಂತಹ ಸರಕಾರದ ಮಹತ್ತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿಲಾಗಿದೆ. ಈ ಮೂಲಕ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಸಾಧ್ಯವಾಗಿಸುವ ರಾಷ್ಟ್ರೀಯ ಸಾಂಸ್ಥಿಕ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆಯೆಂದು ಮೇನಕಾ ದುಂಡು ಮೇಜಿನ ಕಲಾಪದಲ್ಲಿ ವಿವರಿಸಿದ್ದಾರೆ.







