ರೈಲ್ವೆ ತಿದ್ದುಪಡಿ ಮಸೂದೆ ಹಿಂದೆಗೆತ
ಹೊಸದಿಲ್ಲಿ, ಮಾ.15: ಭಾರೀ ಟೀಕೆಯ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೇಸ್(ತಿದ್ದುಪಡಿ) ಮಸೂದೆ-2014ನ್ನು ಲೋಕಸಭೆಯಲ್ಲಿ ಹಿಂದೆಗೆದಿದ್ದಾರೆ.
ಮಸೂದೆಯು ರೈಲಿನ ಮಾಡಿನ ಮೇಲೆ ಕುಳಿತು ಪ್ರಯಾಣದಂತಹ ಪ್ರಯಾಣಿಕರ ನಿರ್ಲಕ್ಷದ ಪ್ರಕರಣಗಳನ್ನು ಹೊರಗಿಡುವ ಮೂಲಕ ‘ಅಕಸ್ಮಾತ್ ಬೀಳುವಿಕೆಯ’ ಬಗ್ಗೆ ಸ್ಪಷ್ಟನೆ ನೀಡುವ ಗುರಿ ಇರಿಸಿತ್ತು.
ರೈಲನ್ನು ಪ್ರವೇಶಿಸುವಾಗ ಅಥವಾ ಇಳಿಯುವಾಗ, ಬಾಗಿಲಿನ ಬಳಿ ನಿಂತಿದ್ದಾಗ ಹಾಗೂ ರೈಲಿನ ಮೆಟ್ಟಲಲ್ಲಿ ಅಥವಾ ಮಾಡಿನ ಮೇಲೆ ಕುಳಿತು ಪ್ರಯಾಣಿಸುವಂತಹ ಪ್ರಕರಣಗಳಲ್ಲಿ ಚಲಿಸುತ್ತಿರುವ ರೈಲಿನಿಂದ ಕೆಳಗೆ ಬೀಳುವ ಘಟನೆಗಳನ್ನು ಕೈಬಿಟ್ಟು ‘ಆಕಸ್ಮಿಕವಾಗಿ ಬೀಳುವಿಕೆ’ ಯನ್ನು ವ್ಯಾಖ್ಯಾನಿಸಲು ಮಸೂದೆ ಬಯಸಿತ್ತು.
ಸಂಸದೀಯ ಸಮಿತಿಯು ತಿದ್ದುಪಡಿಗೆ ಆಕ್ಷೇಪ ಎತ್ತಿ ರೈಲಿನಲ್ಲಿ ಜನಜಂಗುಳಿ ಕಡಿಮೆ ಮಾಡಲು ಅನೇಕ ಕ್ರಮಗಳನ್ನು ಸಲಹೆ ನೀಡಿದ ಕಾರಣ ಮಸೂದೆಯನ್ನು ಹಿಂದೆಗೆಯಲಾಯಿತೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಿಕರಿಂದಾದ ನಿರ್ಲಕ್ಷ ಹಾಗೂ ಆತ್ಮಹತ್ಯಾ ಪ್ರಯತ್ನಗಳಂತಹ ಸಂದರ್ಭದಲ್ಲಿ ಪರಿಹಾರ ನೀಡದಿರಲು ಮಸೂದೆ ನಿರ್ಧರಿಸಿತ್ತು.





