ವಿಧಾನಪರಿಷತ್ ಸದಸ್ಯರ ನಿವಾಸಗಳ ಮೇಲೆ ಐಟಿ ದಾಳಿ

ಬೆಂಗಳೂರು, ಮಾ.15: ರಾಜ್ಯದ ಮೂವರು ವಿಧಾನಪರಿಷತ್ ಸದಸ್ಯರ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಜೆಡಿಎಸ್ ಸದಸ್ಯ ಸಿ.ಆರ್.ಮನೋಹರ್, ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು ಹಾಗೂ ಪಕ್ಷೇತರ ಸದಸ್ಯ ಯು.ಮಲ್ಲಿಕಾರ್ಜುನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಆದಾಯ ತೆರಿಗೆ ವಂಚನೆ ಹಾಗೂ ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ಸರ್ಜಾಪುರದಲ್ಲಿರುವ ಸಿ.ಆರ್.ಮನೋಹರ್, ದೊಮ್ಮಲೂರಿನಲ್ಲಿರುವ ಗೋವಿಂದರಾಜು ಹಾಗೂ ಜಯನಗರದಲ್ಲಿರುವ ಮಲ್ಲಿಕಾರ್ಜುನ್ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿರುವ ಗೋವಿಂದರಾಜು, ಹಲವಾರು ಉದ್ಯಮಗಳ ಒಡೆತನವನ್ನು ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಚಿತ್ರೋದ್ಯಮದಲ್ಲಿ ಮನೋಹರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿನ ಸಂಸ್ಥೆಯೊಂದರಲ್ಲಿ ಮಲ್ಲಿಕಾರ್ಜುನ್ ಪಾಲುದಾರರಾಗಿದ್ದಾರೆ ಎನ್ನಲಾಗಿದೆ.
ಮನೋಹರ್ ಹಾಗೂ ಅವರ ಸಹೋದರಿಗೆ ಸೇರಿದ ಒಟ್ಟು ಐದು ಮನೆಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹಲವಾರು ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.





