ಪ್ರತಿವರ್ಷ 50 ಸಾವಿರ ಟನ್ ಆ್ಯಂಟಿಬಯೋಟಿಕ್ಸ್ ಬಳಕೆ: ಅವಿನಾಶ್
ವಿಶ್ವ ಗ್ರಾಹಕರ ದಿನಾಚರಣೆ

ಉಡುಪಿ, ಮಾ.15: ಮನುಷ್ಯನಿಗೆ ನೀಡುವ ಆ್ಯಂಟಿ ಬಯೋಟಿಕ್ಸ್‌ಗಳಲ್ಲಿ ಶೇ.50ರಷ್ಟನ್ನು ಕಾನೂನಿಗೆ ವಿರುದ್ಧವಾಗಿ ಕೃಷಿ, ಪ್ರಾಣಿಗಳಿಗೆ ಬಳಸಲಾಗುತ್ತಿದೆ. ಇದು ಸರಿಯಾದ ಕ್ರಮ ಅಲ್ಲ. 2014ರಿಂದ ಜಗತ್ತಿನಲ್ಲಿ ಪ್ರತಿವರ್ಷ 50 ಸಾವಿರ ಟನ್ ಆ್ಯಂಟಿ ಬಯೋಟಿಕ್ಸ್ ಬಳಸಲಾಗುತ್ತಿದೆ ಎಂದು ಮಣಿಪಾಲ ಕೆಎಂಸಿಯ ಕಮ್ಯುನಿಟಿ ಹೆಲ್ತ್ ಮೆಡಿಸಿನ್ ವಿಭಾಗದ ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲಾ ಸಭಾಂಗಣದಲ್ಲಿ 'ಆ್ಯಂಟಿ ಬಯೋಟಿಕ್ಸ್ ಗಳೇ ಆಹಾರವಾಗದಿರಲಿ' ಎಂಬ ಘೋಷ ಣೆಯೊಂದಿಗೆ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಇಂದು ಕೆಎಫ್‌ಸಿ, ಮೆಕ್ ಡೋನಾಲ್ಡ್ ತಯಾರಿಸಿದ ಮಾಂಸಾಹಾರ ಖಾದ್ಯಗಳನ್ನು ಜಗತ್ತಿನಲ್ಲಿ 50 ಕೋಟಿ ಮಂದಿ ತಿನ್ನುತ್ತಿದ್ದಾರೆ. ಇಷ್ಟು ಮಂದಿಗೆ ಆಹಾರವಾಗಿ ನೀಡುವ ಕೋಳಿಗಳಿಗೆ ಯಾವುದೇ ರೋಗಗಳು ಬಾರದಂತೆ ಆ್ಯಂಟಿ ಬಯೋಟಿಕ್ಸ್‌ಗಳನ್ನು ನೀಡಲಾಗುತ್ತಿದೆ. ಇವು ಅಂತಹ ಮಾಂಸ ವನ್ನು ತಿನ್ನುವ ನಮ್ಮ ದೇಹಕ್ಕೆ ಪ್ರವೇಶಿಸಿ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ನಾಶ ಮಾಡುತ್ತವೆ ಎಂದವರು ಹೇಳಿದರು.
ಅದೇರೀತಿ ಹಣ್ಣು ತರಕಾರಿಗಳಿಗೂ ರಾಸಾಯನಿಕವನ್ನು ಬಳಸಲಾಗುತ್ತಿದೆ. ಇದು ಕೂಡ ಮಾನವ ದೇಹಕ್ಕೆ ಅಪಾಯ ಕಾರಿಯಾಗಿದೆ. ವೈದ್ಯರು ಕೂಡ ಕೆಲ ವೊಂದು ಔಷಧೀಯ ಕಂಪೆನಿ ಜೊತೆ ಸೇರಿ ರೋಗಿಗಳಿಗೆ ಹೆಚ್ಚಿನ ಆ್ಯಂಟಿ ಬಯೋ ಟಿಕ್ಸ್‌ಗಳನ್ನು ನೀಡುವ ಮೂಲಕ ತಪ್ಪು ಮಾಡುತ್ತಿದ್ದಾರೆ. ಇವನ್ನೆಲ್ಲ ತಡೆಯುವ ನಿಟ್ಟಿನಲ್ಲಿ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಸಿ.ಎಂ. ಮಾತನಾಡಿ, ಗ್ರಾಹಕರಿಗೆ ವಸ್ತುಗಳನ್ನು ಆಯ್ಕೆ ಮಾಡುವ, ಮಾಹಿತಿ ಪಡೆಯುವ, ಅದರಲ್ಲಿ ತೊಂದರೆ ಇದ್ದರೆ ನಿವೇದನೆ ಮಾಡುವ ಮತ್ತು ಅನ್ಯಾಯಕ್ಕೆ ಪರಿಹಾರ ಕೇಳುವ ಹಕ್ಕು ಇದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಶಾಲಾ ಮುಖ್ಯೋಪಾಧ್ಯಾಯಿನಿ ಬಿ. ನಿರ್ಮಲಾ ಉಪಸ್ಥಿತರಿದ್ದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಉಪ ನಿರ್ದೇಶಕ ಎಸ್.ಯೋಗೇಶ್ವರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಹಿಪ್ಪರಗಿ ವಂದಿಸಿದರು.





