ಅಸಾದುದ್ದೀನ್ ಉವೈಸಿಯ ನಾಲಿಗೆ ಕತ್ತರಿಸಿ ತರುವವರಿಗೆ 21 ಸಾವಿರರೂ. ಬಹುಮಾನ!

ಲಕ್ನೊ, ಮಾರ್ಚ್.16: ಎಐಎಂಐಎಂ ಮುಖಂಡ ಅಸಾದುದ್ದೀನ್ ಉವೈಸಿಯ ನಾಲಿಗೆ ಕತ್ತರಿಸಿ ತರುವವರಿಗೆ 21 ಸಾವಿರ ರೂಪಾಯಿಯ ಬಹುಮಾನ ಘೋಷಿಸಲಾಗಿದೆ. ಭಾರತ್ ಮಾತಾಕಿ ಜೈ ಹೇಳಲಾರೆ ಎಂದು ಉವೈಸಿ ಘೋಷಿಸಿದ ಹಿನ್ನೆಲೆಯಲ್ಲಿ ಕೋಲಾಹಲವೇ ಎದ್ದಿವೆ. ಇದರಿಂದ ಆಕ್ರೋಶಗೊಂಡವರು ಒಂದೆಡೆ ಅಸಾದುದ್ದೀನ್ರ ನಾಲಿಗೆಗೆ ಬಹುಮಾನ ಘೋಷಿಸಿದ್ದರೆ, ಇನ್ನೊಂದೆಡೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಉವೈಸಿ ವಿರುದ್ಧ ಲಕ್ನೊ, ಅಲಹಾಬಾದ್,ಮಹಾರಾಜ ಗಂಜ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೀರತ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದುಷ್ಯಂತ್ ತೋಮರ್ ಮಂಗಳವಾರ ಉವೈಸಿಯ ನಾಲಿಗೆ ಕತ್ತರಿಸಿ ತರುವವರಿಗೆ 21 ಸಾವಿರ ರೂಪಾಯಿ ಬಹುಮಾನ ನೀಡುವೆ ಎಂದು ಘೋಷಿಸಿದ್ದಾರೆ. ಎಬಿವಿಪಿಯ ಕಾರ್ಯಕರ್ತ ದುಷ್ಯಂತ್ ಉವೈಸಿಯ ಹೇಳಿಕೆ ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರ ಗೌರವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶಿಸಿದ್ದಾರೆ. ಮಹಾರಾಷ್ಟ್ರದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಅಸಾದುದ್ದೀನ್ ಉವೈಸಿ ತನ್ನ ಕೊರಳಿಗೆ ಚಾಕಿಟ್ಟರೂ ತಾನು ಭಾರತ್ ಮಾತಾಕಿ ಜೈ ಎನ್ನಲಾರೆ. ಹಾಗೆ ಹೇಳಬೇಕೆಂದು ಸಂವಿಧಾನದಲ್ಲಿಲ್ಲ ಎಂದು ಹೇಳಿದ್ದರು. ಸಂಘ ಪರಿವಾರದ ನಾಯಕರು ಹೇಳುತ್ತಾರೆಂದು ತಾನು ಭಾರತ್ ಮಾತಾ ಕಿ ಜೈ ಎನ್ನಲು ಸಿದ್ಧನಿಲ್ಲ ಎಂದು ಉವೈಸಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ಹೊಸ ಪೀಳಿಗೆ ಭಾರತ್ ಮಾತಾಕಿ ಜೈಎಂದು ಹೇಳಲು ಕಲಿಯಬೇಕಾಗಿದೆ ಎಂದು ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ್ ಹೇಳಿದ್ದರು. ಇದಕ್ಕುತ್ತರವಾಗಿ ಉವೈಸಿ ವಿವಾದಿತ ಹೇಳಿಕೆಯನ್ನು ನೀಡಿದ್ದರು.





