ಇದು ಪೊಲೀಸರ ಪಾಡು : ಮಾಡುವ ಮಿತಿಯಿಲ್ಲದ ಕೆಲಸಕ್ಕಿಲ್ಲ ತಕ್ಕ ಸಂಬಳ, ಗೌರವ
ಚುನಾವಣಾ ಕೆಲಸಕ್ಕೂ ಚಿಲ್ಲರೆ ಭತ್ತೆ
ಕಾರ್ಕಳ,ಮಾ16 : ಪೋಲೀಸ್ ಎಂದರೆ ಪವರ್ ಪುಲ್ ಕೆಲ್ಸ ಅಂತಾನೇ ಎಲ್ಲರೂ ಅಂದ್ಕೊಂಡಿರೋದು. ನಿಜ ನೋಡಿದರೆ ಅವರಿಗೆ ಪವರ್ರೂ ಇಲ್ಲ ಕೆಲಸಕ್ಕೆ ಸೂಕ್ತ ಪ್ರತಿಫಲವೂ ಇಲ್ಲ. ಎಲ್ಲರ ಕೆಲ್ಸ ಅವರು ಮಾಡ್ಬೇಕು. ಅವರ ಕೆಲಸ ಮಾಡೋರು ಯಾರೂ ಇಲ್ಲ!
ಕೆಲಸ ಪ್ರಧಾನಿಯಷ್ಟು ಸಂಬಳಕ್ಕೆ ಬಂದಾಗ ಉಗ್ರಾಣಿಗೆ ಸಿಗುವ ವರಮಾನವೂ ಪೋಲಿಸರಿಗೆ ಸಿಗುತ್ತಿಲ್ಲ. ಎನ್ನುವುದಕ್ಕೆ 5 ವರ್ಷಗಳಿಗೊಮ್ಮೆ ಬರುವ ಚುನಾವಣೆ ಸಂದರ್ಭ ಭದ್ರತೆಯ ಕೆಲಸದಲ್ಲಿ ತೊಡಗಿದ ಪೋಲಿಸರಿಗೆ ಮಿಕ್ಕ ಸಿಬ್ಬಂಧಿಗೆ ಸಿಗುವ ಭತ್ಯೆ ಸಿಗುತ್ತಿಲ್ಲ. ಆ ಒಂದು ದಿನದ ಭತ್ಯೆ ಬಟವಾಡೆಯಲ್ಲೂ ತಾರತಮ್ಯ !
ಟ್ವೆಂಟಿ ಪೋರ್ ಅವರ್ಸ್ ಆನ್ ಡ್ಯೂಟಿ:
ಪೋಲೀಸರೆಂದರೆ ಸೈನಿಕರ ಹಾಗೆ 24 ಗಂಟೆಯೂ ಡ್ಯೂಟಿಗೆ ಸಿದ್ಧವಿರಬೇಕು. ಕೆಲವೊಂದು ಸಂದರ್ಭಗಳಲ್ಲಿ ಯೂನಿಫಾರ್ಮ್ ಬದಲಿಸಿ ಹಾಕಲೂ ಸಮಯವಿಲ್ಲ. ಸ್ನಾನ, ವಿಶ್ರಾಂತಿ, ಭದ್ರತೆಯಂತೂ ದೂರದ ಮಾತು. ಪ್ರತಿದಿನದ ಪೋಲಿಸ್ ಠಾಣೆ ಡ್ಯೂಟಿ ಜೊತೆ, ಸರಕಾರಿ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ, ಜಾತ್ರೆ, ಸಂತೆ ಸಭೆ ಸಮಾರಂಭ ಹೀಗೆ ದಿನವೂ ಒಂದಲ್ಲೊಂದು ಬಂದೋಬಸ್ತ್ ಡ್ಯೂಟಿ ಕರೆದಾಗ ತಯಾರಿರುತ್ತಾರೆ. ಆದರೆ, ಡ್ಯೂಟಿಗೆ ಹಾಕಿದಲ್ಲಿ ತೆರಳಲು ಎಷ್ಟು ಬೇಕೋ ಅಷ್ಟು ಭತ್ಯೆ ಸಿಗುವುದಿಲ್ಲ. ಹೋದಲ್ಲಿ ಊಟ ಉಪಹಾರಕ್ಕೆ ಗತಿ ಇಲ್ಲ. ವಾಹನ ಸೌಲಭ್ಯಗಳಂತೂ ಅಧಿಕಾರಿಗಳಿಗೆ ಹೊರತು ಪಡಿಸಿ ಮಿಕ್ಕವರಿಗೆ ಕೈಗೆ ಎಟುಕದ ಸಂಗತಿ. ಹಾಗಾಗಿ ಯಾರದ್ದೋ ಮರ್ಜಿಗೆ ಕೃಪಾಕಟಾಕ್ಷಕ್ಕೆ ಅಂಗಲಾಚಬೇಕಾದ, ಗಂಟುಬೀಳಬೇಕಾದ ದುಸ್ಥಿತಿ ಪೋಲೀಸರದ್ದು ಎಂದರೆ ಅತಿಶಯೋಕ್ತಿ ಇಲ್ಲ.
ತಲೆ ಮರೆಸಿಕೊಂಡ ಕಳ್ಳ, ಕೊಲೆಗಾರ, ಕ್ರಿಮಿನಲ್‌ಗಳನ್ನು ಕರೆತರುವ ಸವಾಲು!
ಪ್ರತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನವೂ ಒಂದಿಲ್ಲೊಂದು ಕ್ರಿಮಿನಲ್ ಪ್ರಕರಣ ನಡೆಯುವುದು ಮಾಮೂಲು. ಕೃತ್ಯವೆಸಗಿದ ಬಳಿಕ ಆರೋಪಿ ಓಡಿರುತ್ತಾನೆ. ನೂರೋ, ಸಾವಿರ ಕಿ.ಮೀ ದೂರ ಓಡಿ ತಲೆಮರೆಸಿಕೊಂಡಿರುತ್ತಾನೆ. ಅಂತಹ ಆರೋಪಿಗಳನ್ನು ಹಿಡಿದು ತರುವ ಸಾಹಸ ಇದೆಯಲ್ಲ ಅಂತಹ ಸಂದರ್ಭದಲ್ಲಾದರೂ ಪರ್ಯಾಪ್ತ ಭತ್ಯೆ ಇದೆಯೇ? ಎಂದರೆ ಅದೂ ಕೇಳಬೇಡಿ.
ಕೊರತೆಗಳಲ್ಲಿ
ಸಿಬ್ಬಂದಿ ಕೊರತೆ, ಉಪಕರಣ, ವಾಹನ ಸೌಲಭ್ಯಗಳ ಕೊರತೆ ನಡುವೆಯೂ ಪೋಲೀಸ್ ಸಿಬ್ಬಂದಿ ಚೆನ್ನಾಗಿಯೆ ಕೆಲ್ಸ ಮಾಡುತ್ತಾರೆ. ಹೆಚ್ಚುವರಿ ಕೆಲಸದ ಒತ್ತಡ ವಹಿಸಿಕೊಳ್ಳುತ್ತಾರೆ. ಸಹಿಸಿಕೊಂಡು ಮರುಮಾತಿಲ್ಲದೆ ಶಿಸ್ತಿನ ಸಿಪಾಯಿಗಳಾಗಿ ಒಪ್ಪಿಸಿದ ಕೆಲ್ಸ ಮಾಡ್ತಾರೆ. ತಮ್ಮ ಕೆಲಸದಲ್ಲಿ ಎದುರಾಗುವ ಅಪಾಯ, ಸೋಲು, ಪ್ರಾಣಭೀತಿ ಮರೆತು ಕೆಲಸ ನಿರ್ವಹಿಸುತ್ತಾರೆ. ಅಂತಹದೊಂದು ದುಡಿತವರ್ಗವೇ ಸರಕಾರದ ಅತ್ಯಂತ ನಿರ್ಲಕ್ಷಿತ ಎನ್ನುವುದು ನಿಜಕ್ಕೂ ಭೇಸರದ ಸಂಗತಿಯೆ ಸರಿ.
ಕೆಲಸದ ಒತ್ತಡದಿಂದ ಕುಟುಂಬ ವರ್ಗದ ಜೊತೆ ಬೆರೆಯಲಾಗದ ಅಸಹಾಯಕತೆ, ವರ್ಗಾವಣೆ ಕಾರಣ ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಲಾಗದ ದುಸ್ಥಿತಿ, ಜೊತೆಗೆ ಸರಕಾರಿ ಕಟ್ಟಡದಲ್ಲಿ ಇದ್ದು ನಿವೃತ್ತಿ ತನಕವೂ ನಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಸರಕಾರಿ ಇಲಾಖೆಗಳ ಜೊತೆಗಿನ ಕೆಲಸ ಮಾಡುವುದು ಸಾಧ್ಯವೇ ಇಲ್ಲ. ಸ್ವಂತದ ಸೂರು ಸುಖ ಸಂಸಾರ ಕಟ್ಟಿಕೊಳ್ಳಲಾಗದವರ ಪರಿಸ್ಥಿತಿಯಂತೂ ನಿಜಕ್ಕೂ ಕಷ್ಟವೇ.
ಚುನಾವಣೆ ಬಂದೋಬಸ್ತ್‌ಗೆ ನೀಡುವ ಭತ್ಯೆಯಲ್ಲಿ ಗಂಭೀರ ತಾರತಮ್ಯ
ಚುನಾವಣೆ ಸಂದರ್ಭ ಪೋಲಿಂಗ್ ಬೂತ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ನೀಡುವ ಭತ್ಯೆಯಲ್ಲೂ ತಾರತಮ್ಯ ಇರುವುದು ಬೆಳಕಿಗೆ ಬಂದಿದೆ. ಚುನಾವಣಾ ಕೇಂದ್ರದ ಅಧ್ಯಕ್ಷ ಅಧಿಕಾರಿ (PRO) ಗೆ ತರಬೇತಿ ಭತ್ಯೆ ರೂ.350, ಮಸ್ಟರಿಂಗ್ ಭತ್ಯೆ ರೂ.350, ಮತದಾನ ದಿನದ ಭತ್ಯೆ ರೂ.350, ಉಪಹಾರ ಭತ್ಯೆ ರೂ.150 ಸೇರಿ ಒಟ್ಟು ರೂ. 1200 ನೀಡಲಾಗುತ್ತಿದೆ. ಸಹಾಯಕ ಅಧ್ಯಕ್ಷ ಅಧಿಕಾರಿಗೆ ತರಭೇತಿ ಭತ್ಯೆ ರೂ.250, ಮಸ್ಟರಿಂಗ್ ಭತ್ಯೆ ರೂ.250, ಮತದಾನ ದಿನದ ಭತ್ಯೆ ರೂ.250, ಉಪಹಾರ ಭತ್ಯೆ ರೂ.150 ಒಟ್ಟು ರೂ. 900 ನೀಡಲಾಗುತ್ತಿದೆ. ಮತದಾನದ ಅಧಿಕಾರಿಗೆ ಮಸ್ಟರಿಂಗ್ ಭತ್ಯೆ ರೂ.250, ಮತದಾನದ ದಿನದ ಭತ್ಯೆ ರೂ.250, ಉಪಹಾರ ಭತ್ಯೆ ರೂ.150, ಒಟ್ಟು 650 ರೂ. ಕೊಡಲಾಗುತ್ತಿದೆ. ಡಿ ಗ್ರೂಪ್ ನೌಕರರಿಗೆ ಮಸ್ಟರಿಂಗ್ ಭತ್ಯೆ ರೂ.150, ಮತದಾನದ ದಿನದ ಭತ್ಯೆ ರೂ.150, ಉಪಹಾರ ಭತ್ಯೆ ರೂ.150 ರೂ. 450 ನೀಡಲಾಗುತ್ತಿದೆ. ಆದರೆ ಶಾಂತಿಯುತ ಮತ್ತು ಮುಕ್ತ ಚುನಾವಣೆಯನ್ನು ಖಾತರಿಪಡಿಸುವ ಪೋಲಿಸ್ ಸಿಬ್ಬಂದಿಗೆ ಸಿಗುವ ಭತ್ಯೆ ಮೊತ್ತ ರೂ.150 ಮಾತ್ರ. ಇನ್ನೂ ದುರಂತ ಎಂದರೆ ನಿರ್ದಿಷ್ಟ ಪೋಲಿಸ್ ಸಿಬ್ಬಂದಿಗೆ ತಮ್ಮ ಕೇಂದ್ರವ್ಯಾಪ್ತಿ ಅಥವಾ ಅಂದರೆ ಜಿಲ್ಲೆಯ ಒಳಗಾದ್ರೂ ಜಿಲ್ಲೆಯ ಹೊರಗಾದ್ರೂ ಭತ್ಯೆ ಮಾತ್ರ ರೂ.150.00 ಮಾತ್ರ.
ಚುನಾವಣಾ ಕೆಲಸದಲ್ಲಿ ನಿರತರಾದ ಇತರ ಸಿಬ್ಬಂದಿಗಳಿಗೆ ಊಟ ಉಪಹಾರದ ಭತ್ಯೆ ರೂಪ್ಯಾ 150 ಸಿಗುತ್ತದೆ. ಬಿಸಿಲಿನಲ್ಲಿ ಕಾಯುವ ಪೋಲೀಸ್ ಸಿಬ್ಬಂದಿಗೆ ನೀರಿಗೂ ಗತಿ ಇಲ್ಲ ಎನ್ನುವ ಸ್ಥಿತಿ. ಚುನಾವಣಾ ಸಂದರ್ಭದಲ್ಲಿ ಕೆಲಸ ನಿರ್ವಹಿಸುವ ಅಬ್ಸರ್ವರ್ಸ್, ಮೈಕ್ರೊ ಅಬ್ಸರ್ವರ್ಸ್‌ಗಳು ಇನ್ನಿತರ ಸಹಾಯಕರಿಗೆ ಸಂಬಳದ ಜೊತೆಗೆ ಹೆಚ್ಚುವರಿ ಸಂಬಳವನ್ನು ಚುನಾವಣಾ ಆಯೋಗ ತಾವಾಗಿಯೇ ನೀಡುತ್ತದೆ. ಚುನಾವಣಾ ಸಂಬಂಧ ಕೆಲಸ ನಿರ್ವಹಿಸುವ ಕಛೇರಿ ಸಿಬ್ಬಂದಿ, ಅಧಿಕಾರಿಗಳಿಗೂ ಪ್ರತ್ಯೇಕ ಭತ್ಯೆಯ ವ್ಯವಸ್ಥೆಯಿದ್ದರೂ, ಪೋಲೀಸರಿಗೆ ಚುನಾವಣಾ ದಿನ ಹಾಗೂ ಮತ ಎಣಿಕೆ ದಿನದ ಭತ್ಯೆ ಮಾತ್ರ ಸಿಗುತ್ತದೆ. ಪೋಲಿಂಗ್ ಸ್ಟೇಷನ್ ಹಾಗೂ ಚುನಾವಣಾ ಮತ ಎಣಿಕೆ ಕೇಂದ್ರ ಹಾಗೂ ಮತ ಪೆಟ್ಟಿಗೆಯನ್ನು ಕಾಯುವ ನಿಯತ್ತಿನ ಕೆಲಸಕ್ಕೆ ಮಾತ್ರ ಕವಡೆ ಕಿಮ್ಮತ್ತಿಲ್ಲ. ಮಾತ್ರವಲ್ಲ ಯಾವುದೇ ಕಾರಣಕ್ಕೂ ಸ್ಥಳ ಬಿಟ್ಟು ಕದಲಲು ಕೂಡ ಅವಕಾಶವಿರುವುದಿಲ್ಲ. ಜೊತೆಗೆ ನಿದ್ರೆಯಂತೂ ದೂರದ ಮಾತು. ಎಲ್ಲಾ ಕೆಲಸ ಮುಗಿದು ಪ್ರತಿಯೊಬ್ಬರೂ ಹೊರಟು ಹೋದರೂ ತಮ್ಮ ಸರದಿ ಮಾತ್ರ ಕೊನೆಗೆ ಅದು ಕೂಡ ಬೇರೆ ಇಲಾಖೆಗಳು ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಲಾಗಿದೆಯೋ ಎಂದು ಖಾತ್ರಿಯಾದ ಮೇಲೆ.
ಚುನಾವಣಾ ಎಣಿಕೆ ಕೆಲಸ ನಿರ್ವಹಿಸುವ ಸರ್ಕಾರಿ ಸಿಬ್ಬಂದಿಗೆ ಅವರ ಮಾಮೂಲಿ ಸಂಬಳ ಜೊತೆ ದಿನಕ್ಕೆ 500, ಮೇಲ್ವೀಚಾರಕರಿಗೆ ಪ್ರತಿಯೊಬ್ಬರಿಗೆ ದಿನಕ್ಕೆ 700ರೂ. ನೀಡಲಾಗುತ್ತದೆ. ಆದರೆ ಚುನಾವಣೆ ಘೋಷಣೆ ಆರಂಭಗೊಂಡ ದಿನದಿಂದ ಮತ ಎಣಿಕೆ ಮುಗಿಯುವವರೆಗೂ ಬಂದೋಬಸ್ತ್ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ ಪೋಲೀಸ್ ಸಿಬ್ಬಂದಿಗೆ ಅವರಿಗೆ ಸಿಗುವ ಸಂಬಳ ಹಾಗೂ ಹೆಚ್ಚುವರಿ ನಯಾಪೈಸೆ ಭತ್ಯೆ ಸಿಗುತ್ತಿಲ್ಲ ಎಂದರೆ ನಂಬಲಾದಿತೇ? ನಂಬಲಾಗದಿದ್ದರೂ , ನಂಬಲೇಬೇಕು. ಇದು ಸತ್ಯ.
ಪೋಲೀಸ್ ಸಿಬ್ಬಂದಿ ಶ್ರಮವೇ ಅಧಿಕ!
ಚುನಾವಣೆ ಸಂದರ್ಭ ವಾಸ್ತವವಾಗಿ ಚುನಾವಣಾ ಕೆಲಸದಲ್ಲಿ ತೊಡಗಿಕೊಂಡ ಇತರ ಸರ್ಕಾರಿ ನೌಕರರಿಗೆ ಹೋಲಿಸಿದರೆ ಪೋಲೀಸ್ ಇಲಾಖೆಯ ಸಿಬ್ಬಂದಿಯ ಶ್ರಮವೇ ಅಧಿಕ. ಮಿಕ್ಕವರಿಗೆಲ್ಲ ಸಮಯದ ಮಿತಿ ಇದ್ದರೆ ಪೋಲಿಸರಿಗೆ ಸಮಯದ ಮಿತಿ ಇಲ್ಲದೆ ಅವಶ್ಯ ಬಿದ್ದಲೆಲ್ಲ ಬಂದೋಬಸ್ತ್ ಮಾಡುತ್ತಾ ದೂರು ಬಂದಲ್ಲೆಲ್ಲ ಧಾವಿಸುತ್ತಾ ಅಕ್ರಮ, ಅಶಾಂತಿ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವವರೆಗೆ ಪೋಲಿಸ್ ಇಲಾಖೆಯು ಚುನಾವಣೆಯ ಮಹತ್ವದ ಜವಾಬ್ದಾರಿ ವಹಿಸಿದ್ದರೂ ಚುನಾವಣೆ ಸಂದರ್ಭ ಅವರಿಗೆ ಯವುದೇ ಸೌಲಭ್ಯ ಸಮರ್ಪಕವಾದ ಹೆಚ್ಚುವರಿ ಭತ್ಯೆ ನೀಡದೆ ಸತಾಯಿಸುವುದು ಯಾವ ನ್ಯಾಯ ಎಂಬ ಪ್ರಶ್ನೆ ಎದುರಾಗುತ್ತದೆ.
ಚುನಾವಣೆಗಾಗಿ ಚುನಾವಣಾ ಆಯೋಗ, ಸರಕಾರ, ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ಮೊತ್ತವನ್ನು ವ್ಯಯಿಸುತ್ತದೆ. ಆದರೆ ಈ ದಿಸೆಯಲ್ಲಿ ಮಹತ್ವದ ಕೆಲಸ ಮಾಡಿದ ಪೋಲಿಸರಿಗೆ ತಾವು ಅನುಭವಿಸುವ ಯಾತನೆಯೇ ಭತ್ಯೆ ಯಾದರೆ ಸರ್ಕಾರಿ ಕೆಲ್ಸದಲ್ಲಿ ಯಾರಿಗೇ ತಾನೆ ವಿಶ್ವಾಸ ಉಳಿದೀತು?
ಚುನಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣ!
ಚುನಾವಣಾ ಕರ್ತವ್ಯದಲ್ಲಿ ನಿರತನಾದ ಪೋಲೀಸ್ ಸಿಬ್ಬಂದಿಗೆ ಊಟೋಪಚಾರ ಪ್ರಯಾಣದ ಖರ್ಚಿಗೂ ಸರಕಾರದಿಂದ ಸೂಕ್ತ ವ್ಯವಸ್ಥೆ ಇಲ್ಲವೆಂದರೇನು. ಆ ಪೋಲೀಸ್ ಸಿಬ್ಬಂದಿಯಾದರೂ ಏನು ತಾನೆ ಮಾಡಬೇಕು. ಹಾಗಾಗಿ ಇದು ಚುನಾವಣೆ ಸಂದರ್ಭ ತಮ್ಮ ಅಗತ್ಯ ಅವಶ್ಯಕತೆಗಳಿಗಾಗಿ ಪೋಲಿಸರು ರಾಜಕೀಯ ಪಕ್ಷಗಳ ಮುಖಂಡರ ಸಹಾಯ ಪಡೆದರೆ ನ್ಯಾಯ ಸಮ್ಮತ ಮತ್ತು ಸೂಕ್ತ ರೀತಿಯ ಚುನಾವಣೆಗೆ ವಾಸ್ತವದಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.
ಕಾನ್ ಸ್ಟೇಬಲ್‌ಗೆ ಜುಜುಬಿ, ಅಧಿಕಾರಿಗಳಿಗೆ ಭತ್ಯೆಯಂಬುದೇ ಇಲ್ಲ
ತಮಾಷೆ ಎಂದರೆ ಚುನಾವಣೆ ಸಂದರ್ಭ ಕರ್ತವ್ಯ ನಿರತ ಪೋಲೀಸ್ ಅಧಿಕಾರಿಗಳಿಗೆ ಯಾವುದೇ ಹೆಚ್ಚುವರಿ ಭತ್ಯೆಗಳೇ ಇಲ್ಲವಂತೆ. ಬರೀ ಪೇದೆಗಳಿಗೆ ಮಾತ್ರ ಅದೂ ಕೂಡ ಜುಜುಬಿ ದಿನವೊಂದಕ್ಕೆ 150.ರೂ ಕೂಲಿ ನೀಡಿ ಚುನಾವಣಾ ಆಯೋಗ ಕೈ ತೊಳೆದುಕೊಳ್ಳುತ್ತದೆ. ಸಿಬ್ಬಂದಿಯ ಊಟ, ಉಪಹಾರ, ಆರೋಗ್ಯ ಓಡಾಟದ ವ್ಯವಸ್ಥೆ, ಅವರು ದುಡಿವ ಹೆಚ್ಚುವರಿ ದುಡಿಮೆಯ ಶ್ರಮವಂತೂ ಆಯೋಗದ ಲೆಕ್ಕಕ್ಕೇ ಇಲ್ಲ ಎಂದರೆ ನಮ್ಮ ಘನ ಚುನಾವಣಾ ಆಯೋಗದ ನೀತಿ ಅರ್ಥವಾಗುತ್ತದೆ.
ಶಿಸ್ತಿಗೆ ಹೆಸರಾದ ಪೋಲೀಸ್ ಇಲಾಖೆಗೆ ಶಿಸ್ತಿಗೆ ಸಮನಾದ ಆದಾಯವಿಲ್ಲದಿರುವುದು ಸರಕಾರದ ಅಶಿಸ್ತು ಎಂದೇ ಹೇಳಬೇಕು. ಮೇಲಾಧಿಕಾರಿಗಳ ಇಲಾಖೆಯ ಮಾತುಗಳಿಗೆ ಮರುಮಾತೆತ್ತದೆ ಆದೇಶ ಪಾಲನೆಯ ಪರಂಪರೆಯ ಪೋಲಿಸ್ ಇಲಾಖೆ ತಮ್ಮ ಸಾಕಷ್ಟು ಕಷ್ಟಗಳನ್ನು ನೋವುಗಳನ್ನೂ ಯಾರಲ್ಲೂ ಹೇಳಿಕೊಳ್ಳುವಂತೆಯೂ ಇಲ್ಲ. ಇಲಾಖೆ ಅವರಿಂದ ಕೆಲಸವನ್ನು ನಿರೀಕ್ಷಿಸುತ್ತದೆಯೆ ವಿನಃ ಸರಕಾರ ಪ್ರತಿಯಾಗಿ ಈ ಇಲಾಖೆಯ ನೌಕರರಿಗೆ ಸುಖವಾಗಿ ನೆಮ್ಮದಿಯಾಗಿ ಬದುಕುವುದಕ್ಕೆ ಕನಿಷ್ಠ ಅನುಕೂಲವನ್ನೂ ಒದಗಿಸುತಿಲ್ಲ ಎನ್ನುವ ವಾಸ್ತವ ಅನೇಕ ಸಂದರ್ಭಗಳಲ್ಲಿ ಮನದಟ್ಟಾಗುತ್ತದೆ. ಮಳೆಗಾಲದಲ್ಲಿ ಸೋರುವ ಹರಕು ಮುರುಕು ಪೋಲಿಸ್ ಲೇನ್‌ಗಳೂ, ಕ್ವಾರ್ಟಸ್‌ಗಳು, ಸರಿಯಾದ ಕುಡಿವ ನೀರಿನ ಸಂಪರ್ಕವಿಲ್ಲದೆ ಅವರ ಕುಟುಂಬ ಯಾತನೆ ಪಡುವ ಪರಿ ಅನೇಕ ಸಲ ಪೋಲಿಸ್ ಇಲಾಖೆಯ ಸಿಬ್ಬಂದಿಯ ದುರಾವಸ್ಥೆಯನ್ನು ಬಯಲು ಮಾಡಿದ್ದಿದೆ.
ಇಲಾಖೆಯ ಕೆಲಸದ ಮೇಲೆ ಬೇರೆ ಜಿಲ್ಲೆಗಳಿಗೆ ಹೋಗಬೇಕಾಗಿ ಬರುವಾಗ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಬಸ್ಸುಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಜೊತೆಗೆ ಇಲಾಖೆಯ ಬಸ್ಸು ಸೌಲಭ್ಯವಿಲ್ಲದಿರುವ ಊರುಗಳಲ್ಲಿ ಪೋಲಿಸರು ಪಡುವ ಯಾತನೆ ನಿಜಕ್ಕೂ ಬೇಸರ ತರಿಸುತ್ತದೆ. ಸರಕಾರಿ ಬಸ್ಸು ಕಡಿಮೆ ಇರುವ ಸ್ಥಳಗಳಲ್ಲಿ, ಸರಕಾರಿ ಬಸ್ಸಿನ ಸೌಲಭ್ಯವಿಲ್ಲದ ಸ್ಥಳಗಳಲ್ಲಿ, ಸರಕಾರಿ ಕರ್ತವ್ಯಕ್ಕೆ ಹೊರಡುವ ಪೋಲಿಸರು ಖಾಸಗಿ ಬಸ್ಸುಗಳಿಗೆ ದುಬಾರಿ ಮೊತ್ತ ತುಂಬಿ ಪ್ರಯಾಣಿಸಬೇಕು. ಖಾಸಗಿ ಬಸ್ಸು ಕಂಪೆನಿಗಳು ಮಾಲಕರಿಂದ ಕನಿಷ್ಠ ಪಾಸ್ ವ್ಯವಸ್ಥೆ ಕೂಡಾ ಇಲಾಖೆ ಮಾಡಿಕೊಡದಿರುವುದು ಅಥವಾ ಅಂಥದ್ದೊಂದು ಸರಕಾರಿ ಆದೇಶ ಇಲ್ಲದಿರುವುದು ಪೋಲಿಸ್ ಸಿಬ್ಬಂದಿಗೆ ಹಾಗೂ ವಿವಿಧ ಪೋಲಿಸ್ ಕೆಲಸದ ಪ್ರಯುಕ್ತ ಆಗಾಗ ದೂರ ಊರುಗಳಿಗೆ ತೆರಳಬೇಕಾದ ಸಂದರ್ಭ ಎದುರಾಗುವ ಪ್ರಯಾಣ ವ್ಯವಸ್ಥೆಯ ಅಸಹಾಯಕತೆ ನಿಜಕ್ಕೂ ಬೇಸರ ತರಿಸುತ್ತದೆ. ಚುನಾವಣೆಗಳ ಸಂದರ್ಭ ರಾಜ್ಯ ಕೇಂದ್ರ ಸರಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ, ಶಿಕ್ಷಕರು ಹೀಗೆ ವಿವಿಧ ವಿಭಾಗಗಳ ನೌಕರರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಹಾಗೆಯೇ ಈ ಪೈಕಿ ವಿವಿಧ ಹುದ್ದೆ ವರ್ಗ, ಉದ್ಯೋಗದ ಮಂದಿಗೆ ವಿವಿದ ಪ್ರಯಾಣದ ವೇತನದ ಮಂದಿ ಚುನಾವಣಾ ಕೆಲಸದಲ್ಲಿ ಏಕಪ್ರಕಾರ ಕಾರ್ಯನಿರ್ವಹಿಸುತ್ತಾರೆ. ಹೆಚ್ಚು ವರಮಾನ, ಸಂಬಳವಿರುವವರೂ ಇರುತಾರೆ. ದಿನಗೂಲಿ ನೌಕರರಂತಹ ಸಣ್ಣ ವೇತನದ ಮಂದಿಯೂ ಚುನಾವಣಾ ಸಿಬ್ಬಂದಿಗಳಲ್ಲಿ ಸೇರಿರುತ್ತಾರೆ. ಹೀಗಿರುವಾಗ ಚುನಾವಣಾ ಆಯೋಗ ಎಲ್ಲರಿಗೂ ಅವರವರ ಆದಾಯದ ಪರಿಗಣನೆ ಇಲ್ಲ್ಲದೆ ಕನಿಷ್ಠ ಭತ್ಯೆ ನೀಡಿದರೆ, ಯಾತನೆ ಪಡುವವರು ಮಾತ್ರ ಕಡಿಮೆ ಸಂಬಳದ ವರ್ಗದ ನೌಕರರು ಎನ್ನುವುದು ಸ್ಪಷ್ಟ.
ರಾಜ್ಯ ಸರಕಾರ, ಕೇಂದ್ರ ಸರಕಾರದ ಎಲ್ಲ ಇಲಾಖೆಗಳಲ್ಲೂ ಸಣ್ಣ ಸಣ್ಣ ಮೀಟಿಂಗ್‌ಗಳಿಗೂ ಪರ್ಯಾಪ್ತ ಭತ್ಯೆ, ಪ್ರಯಾಣ ಭತ್ಯೆ ಮುಂತಾದ ಸವಲತ್ತುಗಳಿರುತ್ತದೆ. ಇಲಾಖೆಯ ಕೆಲಸದಲ್ಲಿ ಹೋಗುತ್ತಿದ್ದರೂ ಅಂದಿನ ಸಂಬಳದ ಜೊತೆ ಭತ್ಯೆ ನೀಡಲಾಗುತ್ತಿದ್ದರೆ. ಅಂದಿನ ಅವರ ಹಾಜರಿ ಜನಸೇವೆಗೆ ಲಭ್ಯವಿರುವುದಿಲ್ಲ. ಹಾಗಿದ್ದರೂ ಅವರಿಗೆೆ ಅಂದಿನ ಸಂಬಳ ಮತ್ತು ಭತ್ಯೆ ಸರಿಯಾಗಿಯೇ ಸಿಗುತ್ತದೆ. ಆದರೆ ಪೋಲಿಸ್ ಇಲಾಖೆ ಮಾತ್ರ ಇಂತಹ ವ್ಯವಸ್ಥೆಗೆ ಅಪವಾದವಾಗಿ ನಿಂತಿರುವುದು ಅಚ್ಚರಿಯ ಸಂಗತಿ.
ರಾಜ್ಯದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ನೌಕರರು 10-11 ಗಂಟೆಗೆ ಡ್ಯೂಟಿಗೆ ಹಾಜರಾದರೆ ಸಾಯಂಕಾಲ 5 ಗಂಟೆಗೆಲ್ಲ ಮನೆ ಸೇರಿ ಬಿಡುತ್ತದೆ. ಮಧ್ಯಾಹ್ನ ಊಟದ ವಿಶ್ರಾಂತಿ ಬೇರೆ ಇರುತ್ತದೆ. ವಾರದ ಕೊನೆ ಬಂತೆಂದರೆ ಅನೇಕ ಅಧಿಕಾರಿ ನೌಕರರು ಶುಕ್ರವಾರ ಸಾಯಂಕಾಲದಿಂದಲೂ ಬಿಡುವಿನಲ್ಲಿದ್ದರೆ ಮರಳಿ ಬರುವುದು ಸೋಮವಾರ 11 ಗಂಟೆಗೆನೇ. ಆದರೆ ಪೋಲೀಸರಿಗೆ ಇಂತಹ ಅವಕಾಶಗಳೇ ಇಲ್ಲ. ಅನೇಕ ಬಾರಿ ಅಗತ್ಯ ಕೆಲಸಕ್ಕಾಗಿ ಮಂಜೂರಾದ ರಜೆಗಳೇ ರದ್ದಾಗಿ ಯೂನಿಫಾರ್ಮ್ ತೊಟ್ಟುಕೊಳ್ಳಬೇಕಾಗುತ್ತದೆ.
ಪೋಲೀಸರಿಗೆ ಎದುರಾಗುವ ಗಿರಾಕಿಗಳೆಲ್ಲ ಹೆಚ್ಚಿನವರು ಕ್ರಿಮಿನಲ್ ಹಿನ್ನೆಲೆಯ ಮಂದಿ, ಕಳ್ಳಕಾಕರೂ, ಪುಂಡ ಪೋಕರಿಗಳು, ವಂಚಕರು, ರೌಡಿಗಳು, ಆಸ್ತಿ, ರಸ್ತೆ, ದಾರಿ ಹಣಕಾಸು ವ್ಯವಹಾರ ಹೀಗೆ ಹತ್ತು ಹಲವು ತಕರಾರುಗಳ ಸರಮಾಲೆ ಹೊತ್ತು ಬರುವವರು. ಪೋಲೀಸರು ಒಂದು ಕಡೆ ಇಂತಹ ಆರೋಪಿ ಅಪರಾಧಿಗಳ ಜೊತೆ ಸೆಣಸಾಡಬೇಕು. ಕಠೋರವಾಗಿ ವರ್ತಿಸಬೇಕಾಗುತ್ತದೆ. ಆದರೆ ಸರಕಾರದ ನಿರ್ಲಕ್ಷಕ್ಕೊಳಗಾದ ಈ ಮಂದಿ ಕೆಲವೊಮ್ಮೆ ಇಂತಹ ಸಮಾಜವಿರೋಧಿಗಳ ಜೊತೆಯೇ ಸ್ನೇಹ ಬೆಳೆಸಿ ತಮ್ಮ ಅಗತ್ಯ ಪೂರೈಸುವ ದುರ್ದೆಸೆಗೂ ಬೀಳುವುದುಂಟು. ಆದರೆ ಇದಕ್ಕೆ ಪೋಲಿಸರನ್ನು ದೂರುವ ಬದಲು ಸರಕಾರ, ಆಡಳಿತ ಇದರ ನೈತಿಕ ಜವಾಬ್ದಾರಿ ಹೊರಬೇಕಾಗುತ್ತೆ ಎನ್ನುವುದು ಕೂಡಾ ಅಷ್ಟೆ ಮುಖ್ಯವಾಗುತ್ತದೆ.