ಗುಜರಾತ್ (ಕಾಕ್ರಪಾರ್ ) ಅಣು ಸ್ಥಾವರದಲ್ಲಿ ಸೋರಿಕೆ : ಸರಕಾರ ಹೇಳದ ಗುಟ್ಟೇನು ?

ಮಾರ್ಚ್ 11ರಂದು ಗುಜರಾತಿನ ಕಾಕ್ರಪರ್ ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾಗಿರುವ ಸುದ್ದಿ ಬಂದಿದೆ. ಪ್ರಾಥಮಿಕ ಶಾಖ ಸಾಗಾಟ ವ್ಯವಸ್ಥೆಯಲ್ಲಿ ಸೋರಿಕೆಯಾಗುತ್ತಿರುವ ಕಾರಣ ಸ್ಥಾವರದ ಒಂದನೇ ಯುನಿಟನ್ನು ಮುಚ್ಚಲಾಗಿದೆ ಎಂದು ಭಾರತೀಯ ಪರಮಾಣು ಮಂಡಳಿಯ ಅಧಿಕೃತ ಪ್ರಕಟಣೆ ಹೇಳಿದೆ. ಪ್ರಕಟಣೆಯಲ್ಲಿ ವಿಕಿರಣ ಸೋರಿಕೆ ಇಲ್ಲ ಮತ್ತು ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎಂದೂ ಹೇಳಲಾಗಿದೆ.
ಆದರೆ ನಂತರ ಪರಮಾಣು ವಿದ್ಯುತ್ ಮಂಡಳಿ ಅಥವಾ ಭಾರತದಲ್ಲಿ ಅಣು ಸುರಕ್ಷೆ ಜವಾಬ್ದಾರಿ ಹೊಂದಿರುವ ಅಣು ಇಂಧನ ನಿಯಂತ್ರಣ ಮಂಡಳಿಯಿಂದ ಯಾವುದೇ ವಿವರಗಳು ಬಂದಿಲ್ಲ. ಸೋರಿಕೆಯ ಸುದ್ದಿಯಾಗಿ ಮೂರು ದಿನಗಳಾಗಿವೆ. ಹೀಗಾಗಿ ಅಪೂರ್ಣ ಮಾಹಿತಿಯಿಂದ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಕಷ್ಟ. ಕಾಕ್ರಪರ್ ಸ್ಥಾವರದಲ್ಲಿ ಮಾರ್ಚ್ 11 ಸಂಜೆ ನಿವೇಶನ ಜಾಗೃತಿಯನ್ನು ಘೋಷಿಸಲಾಗಿದೆ. ಸೋರಿಕೆ ಬೆಳಿಗ್ಗೆಯೇ ಆರಂಭವಾಗಿತ್ತು ಎಂದೂ ಹೇಳಲಾಗಿದೆ. ಆದರೆ ಈಗ ಆ ತುರ್ತು ಸ್ಥಿತಿಯನ್ನು ಸರಿಸಲಾಗಿದೆಯೇ ಮತ್ತು ಪರಿಸ್ಥಿತಿ ಸಹಜವಾಗಿದೆಯೇ ಎಂದು ವಿವರ ತಿಳಿದಿಲ್ಲ. ತಪಿಯ ಜಿಲ್ಲಾಧಿಕಾರಿ ಬಿಸಿ ಪತ್ನಿ ಹೇಳುವಂತೆ ಸ್ಥಳದಲ್ಲಿ ತುರ್ತು ಸ್ಥಿತಿ ಈಗಲೂ ಇದೆ. ಸ್ಥಾವರ ಸೂರತ್ ಜಿಲ್ಲೆಯಲ್ಲಿ ಅಧಿಕೃತವಾಗಿ ಇದ್ದರೂ, ಸಮೀಪದ ನಿವಾಸ ಸ್ಥಾನಗಳು ತಪಿ ಜಿಲ್ಲೆಗೆ ಸೇರಿವೆ. ಜಿಲ್ಲಾಧಿಕಾರಿ ಹೇಳಿರುವಂತೆ ಸ್ಥಳದ ನೀರು ಮತ್ತು ಮಣ್ಣಿನ ಮಾದರಿಗಳನ್ನು ವಿಕಿರಣ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಹಾಗೆಯೇ ಆ ದಿನ ಮುಂಜಾವಿನ ಪಾಳಿಯಲ್ಲಿದ್ದ ಕಾರ್ಮಿಕರ ಸ್ಥಿತಿಗತಿಯ ಬಗ್ಗೆಯೂ ವಿವರವಿಲ್ಲ. ಘಟಕದ ಅಧಿಕಾರಿಗಳು ವಿಕಿರಣದ ಪ್ರಮಾಣ ಹೆಚ್ಚೇನೂ ಇಲ್ಲ ಎಂದಷ್ಟೇ ವಿವರ ನೀಡುತ್ತಿದ್ದಾರೆ. ಸೂರತ್ ಜಿಲ್ಲಾಧಿಕಾರಿ ಅಧಿಕೃತವಾಗಿ ಪರಮಾಣು ಘಟಕಗಳಿಗೆ ಸಂಬಂಧಿಸಿದವರಿಂದ ಬಂದ ಮಾಹಿತಿಗಿಂತ ಹೆಚ್ಚಿನ ವಿವರ ತಮ್ಮ ಬಳಿ ಇಲ್ಲ ಎಂದೇ ಉತ್ತರಿಸಿದ್ದಾರೆ.





