ಆರೋಪಗಳಿಂದ ಬೇಸತ್ತು ಭಾವುಕರಾದ ಸಚಿವ ರಮಾನಾಥ ರೈ
ಗಾನದಪಡ್ಪು: ಜಿಪಂ-ತಾಪಂ ಚುನಾವಣೆ ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ, ಮಾ.16: ರಾಜ್ಯ ಅರಣ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತನ್ನ ವಿರುದ್ಧ ಕೆಲವರು ಮಾಡುತ್ತಿರುವ ಇಲ್ಲಸಲ್ಲದ ಆರೋಪಗಳಿಂದ ನೊಂದು ಭಾವುಕರಾದ ಘಟನೆ ಇಂದು ಬಿ.ಸಿ.ರೋಡ್ ಸಮೀಪದ ಗಾನದಪಡ್ಪುವಿನಲ್ಲಿ ನಡೆಯಿತು.
ಗಾನದಪಡ್ಪು ನಾರಾಯಣ ಗುರು ಮಂದಿರ ಸಭಾಂಗಣದಲ್ಲಿಂದು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಪಂ ಚುನಾವಣೆಗೆ ಬಂಟ್ವಾಳ ತಾಲೂಕಿನಿಂದ ಸ್ಪರ್ಧಿಸಿರುವ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ರೈ, ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಜಾತಿ, ಮತ, ಧರ್ಮದ ಭೇದವಿಲ್ಲದೆ ಹಗಲು ರಾತ್ರಿ ಶ್ರಮವಹಿಸುತ್ತಿದ್ದರೂ ಕೆಲವರು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಅಪಹಾಸ್ಯ ಮಾಡುತ್ತಿದ್ದಾರೆ. ಬಿಜೆಪಿ ಸುಳ್ಳು ಹೇಳುವುದರ ಮೂಲಕ ರಾಜಕೀಯ ಮಾಡುತ್ತಿದೆ. ನಾನು ಉದಾಸೀನ ಮಾಡದೆ ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದೇನೆ. ನನ್ನನ್ನು 7 ಬಾರಿ ಶಾಸಕನಾಗಿ 3 ಬಾರಿ ಮಂತ್ರಿಯಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನತೆಯ ಋಣ ತೀರಿಸಲು ನಾನೆಂದು ಬದ್ಧ ಎಂದು ಭಾವುಕರಾಗಿ ಕಣ್ಣೀರಿಟ್ಟರು.
ಈ ವೇಳೆ ಇಡೀ ಸಭೆಯೇ ಮೌನವಾಗಿದ್ದು, ಬಹುತೇಕ ಸಭಿಕರು ಕೂಡಾ ಭಾವುಕರಾದ ದೃಶ್ಯ ಕಂಡುಬಂದವು.
ಮತ್ತೆ ಮಾತು ಮುಂದುವರಿಸಿದ ಅವರು, ಎತ್ತಿನಹೊಳೆ ಯೋಜನೆ ಬಗ್ಗೆ ರಮಾನಾಥ ರೈ ಮೌನವಾಗಿದ್ದರೆ ಎಂದು ಆರೋಪಿಸುತ್ತಿರುವ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್‌ರವರು ಯಡಿಯೂರಪ್ಪಸರಕಾರ ಈ ಯೋಜನೆಯನ್ನು ಮಂಜೂರು ಮಾಡಿದಾಗ ಮೃತಪಟ್ಟಿದ್ದರೆ ಎಂದು ಗುಡುಗಿದರು.





