ಪ್ಲಾನೆಟ್ ಎಸ್‌ಕೆಸ್ ಉದ್ಘಾಟನೆಯ ಸಂದರ್ಭದಲ್ಲಿ ಅನಾವರಣಗೊಂಡ ಕರಾವಳಿಯ ಗ್ರಾಮೀಣ ಜನಜೀವನದ ಚಿತ್ರಣ
ಮಂಗಳೂರು.ಮಾ.15:ನಗರದಲ್ಲಿ ನಿರ್ಮಾಣಗೊಂಡಿರುವ 40 ಅಂತಸ್ತುಗಳ ರಾಜ್ಯದ ಅತ್ಯಂತ ಎತ್ತರದ ವಸತಿ ಸಂಕೀರ್ಣ ಪ್ಲಾನೆಟ್ ಎಸ್‌ಕೆಎಸ್‌ನ್ನು ಉದ್ಘಾಟನೆಯ ಸಂದರ್ಭದಲ್ಲಿ ಗ್ರಾಮೀಣ ತುಳುನಾಡಿನ ಗೃಹಬಳಕೆಯ ವಸ್ತುಗಳ ಪ್ರದರ್ಶನದ ಮೂಲಕ ತುಳು ನಾಡಿನ ಗ್ರಾಮೀಣ ಜನಜೀವನದ ಚಿತ್ರಣ ,ಹಾಗೂ ಗ್ರಾಮೀಣ ಜನರ ಕರಕುಶಲ ಕರ್ಮಿಗಳು ಹಾಗೂ ಜನಸಾಮಾನ್ಯರ ಕುಶಲ ಕರ್ಮಿಗಳ ಕೈಚಳದ ಪ್ರದರ್ಶನನೊಂದಿಗೆ ಕರಾವಳಿಯ ಹಲವು ದಶಕಗಳ ಹಿಂದಿನ ಜನಜೀವನದ ಚಿತ್ರಣ ಅನಾವರಣಗೊಂಡಿತ್ತು.
ಮಂಗಳೂರು ಮಹಾನಗರದಲ್ಲಿ ಪ್ರಥಮ ಬಾರಿಗೆ ಅತ್ಯಂತ ಎತ್ತರದ ಕಟ್ಟಡ ಒಂದು ಕಡೆ ಉದ್ಘಾಟನೆಗೊಳ್ಳುತ್ತಿದ್ದಂತೆ ತಳಭಾಗದಲ್ಲಿ ವಸ್ತು ಪ್ರದರ್ಶನದ ಆವರಣದಲ್ಲಿ ಕೆಲವು ಗ್ರಾಮೀಣ ಕರಕುಶಲ ಕರ್ಮಿಗಳು ಕಾಡಿನ ಬಳ್ಳಿಯಿಂದ ಬುಟ್ಟಿ ಮಾಡುವ ಪ್ರಾತ್ಯಕ್ಷತೆ,ಬೀಸುವ ಕಲ್ಲಿನ ಮೂಲಕ ಕಾಳು ಬೀಸುವ ಕೆಲಸದ ಪ್ರದರ್ಶನ ನಡೆದಿತ್ತು.ಇನ್ನೊಂದು ಕಡೆ ಗ್ರಾಮೀಣ ಕಾಲದಲ್ಲಿ ಲೋಹ ಯುಗದ ಆರಂಭದ ಬಳಿಕ ಕರಾವಳಿಯಲ್ಲಿ ಶ್ರಮ ಜೀವಿಗಳು ಬಳಸುತ್ತಿದ್ದ ಕೃಷಿ ಚಟುವಟಿಕೆಗಳ ಸಾಮಾಗ್ರಿಗಳು,ಹಾರೆ,ಗುದ್ದಲಿ,ಅಳತೆಯ ಸಾಮಾಗ್ರಿಗಳು,ಬಳ್ಳ,ದ್ರವ್ಯ ಮಾಪಕದ ಪಾತ್ರೆಗಳು,ಆಭರಣಗಳು,ಸೌಂದರ್ಯ ಸಾಧನಗಳು,ಮರ,ಲೋಹದ ದಿನಬಳಕೆಯ ಸಾಮಗ್ರಿಗಳು,ಲಾಟನು ,ಹಣದ ತೈಲಿ,ಅರೆಯುವ ಸಾಮಗ್ರಿ ,ತಂಬೂಲ ತಿಂದ ಬಳಿಕ ಉಗುಳುವ ಪಿಕದಾನಿ,ಹಾಲು ಕಾಯಿಸುವ ಪಾತ್ರೆ,ತಂಬಿಗೆ ನೀರು ಶೇಖರಿಸು ತಾಮ್ರದ ಹಂಡೆ,ಒಲೆ,ಬೀಗ,ಹರಿವಾಣ ಜಾನುವಾರುಗಳಿಗೆ ತಿಂಡಿ ನೀಡುವ ಪಾತ್ರೆಗಳು.ಭತ್ತ ,ಅಕ್ಕಿ ಅಳೆಯುವ ಸಾಮಗ್ರಿಗಳು,ನಿರ್ಮಾಣ ಕಾಮಗಾರಿಗೆ ಬಳಸುವ ವಸ್ತುಗಳು,ಬಾವಿಯಿಂದ ನೀರು ಸೇದಲು ಬಳಸುವ ಸಾಮಾಗ್ರಿಗಳು ಸೇರಿದಂತೆ ವಿವಿಧ ಸಾಮಾಗ್ರಿಗಳು ಆಧುನಿಕ ಆವಿಷ್ಕಾರಗಳಾದ ದೂರವಾಣಿ,ಗಡಿಯಾರ,ತಿಂಡಿ ತಯಾರಿಸುವ ಸಾಮಗ್ರಗಳ ಅಪೂರ್ವ ಸಂಗ್ರಹ ಜನರನ್ನು ಆಕರ್ಷಿಸಿತ್ತು.ಕಾರ್ಯಕ್ರಮಕ್ಕೆ ವಿಶೇಷ ಪ್ರಾದೇಶಿಕ ಮೆರುಗನ್ನು ನೀಡಿತ್ತು.





