ಸರ್ಕಾರಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ- ಜಿಲ್ಲಾ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ
ಪುತ್ತೂರು ಸಮುದಾಯ ಭವನದಲ್ಲಿ ಮಹಿಳಾ ದಿನಾಚರಣೆ

ಪುತ್ತೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಹಲವಾರು ಯೋಜನೆಗಳು ಜಾರಿಗೊಂಡಿದ್ದು, ಈ ಯೋಜನೆಯ ಫಲವಾಗಿ ಇಂದು ಮಹಿಳೆಯರು ಸಂಘಟಿತರಾಗಿದ್ದು ಸ್ವಾವಲಂಬಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹೇಳಿದರು.
ಅವರು ಪುತ್ತೂರು ನಗರ ಸಭೆಯ ಸ್ವರ್ಣೋದಯ ನಿರಂತರ ಉಳಿತಾ ಸಂಘಗಳ ಒಕ್ಕೂಟದ ವತಿಯಿಂದ ಬುಧವಾರ ನಗರಸಭಾ ಸಮುದಾಯ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಮಾತನಾಡಿದ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಅವರು ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಮಹಿಳಾ ಗುಂಪನ್ನು ಹುಟ್ಟುಹಾಕಲು ಕಾರಣಕರ್ತರಾದ ಪೌರಾಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.
ಪೌರಾಯುಕ್ತೆ ರೇಖಾ ಜೆ.ಶೆಟ್ಟಿ ಮಾತನಾಡಿ ಸುಮಾರು 135 ಮಹಿಳಾ ನಿರಂತರ ಉಳಿತಾಯ ಗುಂಪುಗಳು ನಗರಸಭಾ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿದ್ದು, ಪರಸ್ಪರ ಸಹಕಾರದೊಂದಿಗೆ ಈ ಗುಂಪುಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಮಹಿಳೆಯರು ಅಬಲೆಯಲ್ಲ ಸಬಲೆಯರು ಎಂಬುದನ್ನು ನಿರೂಪಿಸಿದ್ದಾರೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಪತ್ರಕರ್ತ ಸಂಶುದ್ಧೀನ್ ಸಂಪ್ಯ ಅವರು ಉಳಿತಾಯ ಗುಂಪುಗಳ ಮೂಲಕ ಸಂಘಟಿತರಾಗಿ ಆತ್ಮವಿಶ್ವಾಸ ಬೆಳೆಸಿಕೊಂಡಿರುವ ಸಂಘಟನೆಯಿಂದ ಮಹಿಳೆಯರಲ್ಲಿ ಹೊಸ ಚಿಂತನೆಗಳು ಮೊಳಕೆಯೊಡೆದಿದೆ. ಆದರೆ ಅದನ್ನು ಕ್ರಿಯಾಶೀಲಗೊಳಿಸಿ ಗಟ್ಟಿಗೊಳಿಸಬೇಕಾಗಿದೆ ಎಂದರು.
ಸ್ವರ್ಣಜಯಂತಿ ಶಹರಿ ರೋಜ್‌ಗಾರ್ ಯೋಜನೆಯ ಸ್ವಸಹಾಯ ಗುಂಪಿನ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಶಹರಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಸಂಧ್ಯಾ ಸಂಪ್ಯ ವಂದಿಸಿದರು. ನ್ಯಾಯವಾದಿ ಹರೀಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು.







