ಸ್ಮೃತಿ ಇರಾನಿ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ತನ್ನಿ : ದೆಹಲಿ ವಿವಿಗೆ ಪಟಿಯಾಲ ಹೌಸ್ ಕೋರ್ಟ್

ಹೊಸದಿಲ್ಲಿ , ಮಾ. 16 : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ತರುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ದೆಹಲಿ ವಿವಿ ಹಾಗು ಚುನಾವಣಾ ಆಯೋಗಗಳಿಗೆ ಆದೇಶಿಸಿದೆ ಎಂದು ಎ ಎನ್ ಐ ವರದಿ ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ಅಫಿದವಿತ್ ನಲ್ಲಿ ಸ್ಮೃತಿ ತಮ್ಮ ಶೈಕ್ಷಣಿಕ ಅರ್ಹತೆ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ದೂರೊಂದು ದಾಖಲಾಗಿತ್ತು.
ಬೇರೆ ಬೇರೆ ಚುನಾವಣೆಯ ಸಂದರ್ಭಗಳಲ್ಲಿ ಸ್ಮೃತಿ ತದ್ವಿರುದ್ಧ ಶೈಕ್ಷಣಿಕ ಅರ್ಹತೆಯ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಹವ್ಯಾಸಿ ಲೇಖಕ ಅಹ್ಮದ್ ಖಾನ್ ಅವರು ದೂರು ದಾಖಲಿಸಿದ್ದರು.
2004 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಾವು ದೆಹಲಿ ವಿವಿಯಿಂದ ಬಿ ಎ ಪದವಿ ಪಡೆದಿದ್ದೇನೆ ಎಂದು ಸ್ಮೃತಿ ಅಫಿದವಿತ್ ಸಲ್ಲಿಸಿದ್ದರು. ಆದರೆ 2011 ರಲ್ಲಿ ಗುಜರಾತ್ ನಿಂದ ರಾಜ್ಯಸಭಾ ಚುನಾವಣೆಗೆ ಅಫಿದವಿತ್ ಸಲ್ಲಿಸುವಾಗ ಅವರು ದೆಹಲಿ ವಿವಿಯಿಂದ ಬಿ ಕಾಂ , ಭಾಗ ಒಂದು ( ದೂರಶಿಕ್ಷಣ ) ಎಂದು ನಮೂದಿಸಿದ್ದರು ಎಂದು ಹೇಳಲಾಗಿದೆ.





