ಬೆಂಗರೆ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಡಿವೈಎಫ್ ಪ್ರತಿಭಟನೆ

ಮಂಗಳೂರು,ಮಾ.16: ಬೆಂಗರೆ ನಾಗರೀಕರ ಮೇಲೆ ಪೊಲೀಸರ ತಾರತಮ್ಯ ನೀತಿಯನ್ನು ಖಂಡಿಸಿ, ಪಣಂಬೂರು ದಾಖಲಾಗಿರುವ ಮೊಕದ್ದಮೆಯಿಂದ ಅಮಾಯಕರ ಹೆಸರು ಕೈಬಿಡಲು ಒತ್ತಾಯಿಸಿ ಇಂದು ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿಯ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಸಬಾ ಬೆಂಗ್ರೆಯ ಮುಸ್ಲಿಂ ಯುವಕರನ್ನು ಕ್ರಿಮಿನಲ್‌ಗಳಂತೆ ನೋಡುವ ಪ್ರವೃತ್ತಿಯನ್ನು ಪಣಂಬೂರು ಪೊಲೀಸರು ಕೈಬಿಡಬೇಕು. ವಿನಾಕಾರಣ ಕಸಬಾ ಬೆಂಗ್ರೆಯ ಯುವಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಮುಂದುವರಿದರೆ ಪಣಂಬೂರು ಠಾಣೆಯೆದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಸಬಾ ಬೆಂಗ್ರೆಯಲ್ಲಿ ಮುಸ್ಲಿಂ ಯುವಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಗೆ ಶಾಸಕ ಜೆ. ಆರ್.ಲೋಬೋ, ವಿಧಾನಪರಿಷತ್ ಐವನ್ ಡಿಸೋಜ ಗಮನಹರಿಸಬೇಕು. ಪಣಂಬೂರು ಪೊಲೀಸರು ಪಾಸ್‌ಪೋರ್ಟ್ ಡೆಯಲು ಹೋಗುವ ಯುವಕರ ಮೇಲೆ ಅನಗತ್ಯ ವಿಚಾರಣೆ ನಡೆಸುತ್ತಿದ್ದು ದಾಖಲೆಗಳು ಸರಿಯಿದ್ದರೆ ಪಾಸ್‌ಪೋರ್ಟ್‌ನ್ನು ನೀಡಲು ಸಮಸ್ಯೆಯನ್ನುಂಟುಮಾಡಬಾರದು. ದೌರ್ಜನ್ಯ ನಡೆಸುತ್ತಿರುವ ಪೊಲೀಸರನ್ನು ವರ್ಗಾವಣೆ ಮಾಡಬೇಕು ಮತ್ತು ದಕ್ಷ ಪೊಲೀಸ್ ಅಧಿಕಾರಿಯನ್ನು ಪಣಂಬೂರು ಠಾಣೆಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್, ಇಮ್ತಿಯಾಝ್ ಬಿ.ಕೆ , ಡಿವೈಎಫ್‌ಐ ಬೆಂಗರೆ ಗ್ರಾಮಸಮಿತಿ ಮುಖಂಡರುಗಳಾದ ನೌಷದ್ ಬೆಂಗ್ರೆ, ಹನೀಫ್ ಬೆಂಗ್ರೆ, ವಹಾಬ್ ಬೆಂಗ್ರೆ, ನೌಷದ್ ಬೆಂಗ್ರೆ, ರಿಯಾಜ್ ಬೆಂಗ್ರೆ, ಅಯೂಬ್ ಮೊದಲಾದವರು ನೇತೃತ್ವ ವಹಿಸಿದ್ದರು.







