ಮಂಗಳೂರು : 20 ಅನಧಿಕೃತ ಗೂಡಂಗಡಿಗಳ ತೆರವು

ಮಂಗಳೂರು,ಮಾ.16:ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಹಲವೆಡೆ ಇಂದು ಅನಧಿಕೃತ 20 ಗೂಡಂಗಡಿಗಳನ್ನು ಮನಪಾ ತೆರವುಗೊಳಿಸಿತು.
ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಆರಂಭವಾದ ಕಾರ್ಯಚರಣೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ಜೆಸಿಬಿಗಳನ್ನು ಬಳಸುವ ಮೂಲಕ ತೆರವುಗೊಳಿಸಲಾಯಿತು.
ಮಂಗಳೂರು ಸರ್ವಿಸ್ ಬಸ್ ನಿಲ್ದಾಣ, ಲೇಡಿಗೋಷನ್ ರಸ್ತೆಯ ಎದುರು ಇರುವ ಸುಮಾರು 20 ಗೂಡಂಗಡಿಗಳನ್ನು ತೆರವು ಮಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ, ಕಂದಾಯ ಅಧಿಕಾರಿ ಪ್ರವೀಣ್ ಚಂದ್ರ, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಿಜಯ್, ಸಹಾಯಕ ಅಧಿಕಾರಿಗಳು , ಮನಪಾ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಪೊಲೀಸ್ ಹಾಗೂ ಕೆ.ಎಸ್.ಆರ್.ಪಿ ತುಕಡಿಗಳ ರಕ್ಷಣೆಯಲ್ಲಿ ಅನಧೀಕೃತ ಗೂಡಂಗಡಿಗಳ ತೆರವು ನಡೆಸಲಾಯಿತು.
ತೆರವು ಕಾರ್ಯಚರಣೆಯ ವೇಳೆ ಇನ್ನು ಪರವಾನಿಗೆ ನವೀಕರಣಗೊಳ್ಳದ ನಂದಿನಿ ಹಾಲಿನ ಬೂತನ್ನು ತೆರವುಗೊಳಿಸಲು ಮುಂದಾದಾಗ ಅಧಿಕಾರಿಗಳು ಹಾಗೂ ಬೂತ್ ಮಾಲಕರ ನಡುವೆ ಮಾತಿನ ಚಕಮಕಿಯು ನಡೆಯಿತು.
ಈ ಸಂದರ್ಭದಲ್ಲಿ ಹಾಲಿನ ಬೂತಿನ ಹೊರಗಡೆಯಿರುವ ಕಂಬಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು.
ಸರ್ವಿಸ್ ಬಸ್ ಸ್ಟಾಂಡ್ ಮತ್ತು ಲೇಡಿಗೋಷನ್ ಎದುರು ಇರುವ ಸುಮಾರು 20 ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಮನಪಾ ವ್ಯಾಪ್ತಿಯಲ್ಲಿರುವ ಇನ್ನಷ್ಟು ಅನಧಿಕೃತ ಗೂಡಾಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತದೆ- ರಾಜು ಮೊಗವೀರ, ಉಪ ಆಯುಕ್ತ,ಮನಪಾ







