ಪಾಕ್‌ನಲ್ಲಿ ಹೋಳಿ, ದೀಪಾವಳಿ, ಈಸ್ಟರ್‌ಗೆ ಸಾರ್ವಜನಿಕ ರಜೆ
ಇಸ್ಲಾಮಾಬಾದ್, ಮಾ.16: ಇದೇ ಮೊದಲ ಬಾರಿಗೆ ಪಾಕಿಸ್ತಾನ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೋಳಿ,ದೀಪಾವಳಿ ಹಾಗೂ ಈಸ್ಟರ್ ಹಬ್ಬಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಿದೆ. ದೇಶದ ಹಿಂದೂ ಹಾಗೂ ಕ್ರೈಸ್ತ ಅಲ್ಪಸಂಖ್ಯಾತರಿಗೆ ಹೋಳಿ, ದೀಪಾವಳಿ ಹಾಗೂ ಈಸ್ಟರ್ ಹಬ್ಬಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲು ಅವಕಾಶ ಮಾಡಿಕೊಡುವ ನಿರ್ಣಯವೊಂದನ್ನು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಬುಧವಾರ ಅಂಗೀಕರಿಸಿದೆ.ಪಿಎಂಎಲ್-ಎನ್ ಪಕ್ಷದ ಸಂಸದ ರಮೇಶ್ ಕುಮಾರ್ ಈ ಕುರಿತ ನಿರ್ಣಯವೊಂದನ್ನು ಸದನದಲ್ಲಿ ಮಂಡಿಸಿ ಮಾತನಾಡುತ್ತಾ, ಸರಕಾರವು ಹೋಳಿ, ದೀಪಾವಳಿ ಹಾಗೂ ಈಸ್ಟರ್ ಹಬ್ಬಗಳನ್ನು ಅಲ್ಪಂಖ್ಯಾತರಿಗೆ ರಜಾದಿನಗಳೆಂದು ಘೋಷಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧಾರ್ಮಿಕ ವ್ಯವಹಾರಗಳ ಸಹಾಯಕ ಸಚಿವ ಪೀರ್ ಆಮಿನುಲ್ ಹಸ್ನತ್ ಶಾ ಸದನದಲ್ಲಿ ಮಾತನಾಡುತ್ತಾ, ತಮ್ಮ ಧಾರ್ಮಿಕ ಹಬ್ಬಗಳಿಂದ ಅಲ್ಪಸಂಖ್ಯಾತರಿಗೆ ರಜೆಯನ್ನು ನೀಡುವಂತೆ ಸರಕಾರವು ಸರಕಾರಿ ಇಲಾಖೆಗಳ ವರಿಷ್ಠರಿಗೆ ಈಗಾಗಲೇ ಅನುಮತಿಯನ್ನು ನೀಡಿರುವುದಾಗಿ ತಿಳಿಸಿದರು. ಜಗತ್ತಿನ ಯಾವುದೇ ರಾಷ್ಟ್ರಗಳಿಗಿಂತ ಪಾಕಿಸ್ತಾನವು ಅತ್ಯಕ ರಜಾದಿನಗಳನ್ನು ಹೊಂದಿದೆ. ಈ ಕಾರಣದಿಂದಾಗಿ ರಜಾದಿನಗಳ ಸಂಖ್ಯೆಯನ್ನು ಪರಿಷ್ಕರಿಸುವ ಅಗತ್ಯವಿದೆಯೆಂದು ಅವರು ತಿಳಿಸಿದರು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಆಚರಿಸುತ್ತಿರುವ ಧಾರ್ಮಿಕ ಹಬ್ಬಗಳ ಬಗ್ಗೆ ತನ್ನ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ ಅವರು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ಎಸಗಲು ಆಸ್ಪದ ನೀಡಲಾಗುವುದಿಲ್ಲವೆಂದು ತಿಳಿಸಿದರು.







