2015ರಲ್ಲಿ ರೈಲ್ವೆಯ ಊಟೋಪಚಾರ ಸೇವೆ ಕುರಿತು 5,000 ದೂರುಗಳು ದಾಖಲು

ಹೊಸದಿಲ್ಲಿ,ಮಾ.16: ದೂರ ಪ್ರಯಾಣದ ಮತ್ತು ಪ್ರಮುಖ ರೈಲುಗಳಲ್ಲಿ ಊಟೋಪಚಾರ ಸೇವೆಗಳಿಗೆ ಸಂಬಂಸಿದಂತೆ ಕಳೆದ ವರ್ಷ 4,969 ದೂರುಗಳು ದಾಖಲಾಗಿವೆ ಮತ್ತು ಗುತ್ತಿಗೆದಾರರ ವಜಾ ಸೇರಿದಂತೆ ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ರೈಲ್ವೆ ಸಚಿವ ಮನೋಜ್ ಸಿನ್ಹಾ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ನಿಯಮಾವಳಿಯನ್ನು ಉಲ್ಲಂಸಿದ ಪರವಾನಿಗೆಗಳಲ್ಲಿ ಅಪರಾಧದ ಗಂಭೀರತೆಯನ್ನು ಆಧರಿಸಿ 1,203 ಎಚ್ಚರಿಕೆ ಪ್ರಕರಣಗಳು, 2,321ದಂಡ ಪ್ರಕರಣಗಳು ಸೇರಿವೆ. ಒಂದು ಪ್ರಕರಣದಲ್ಲಿ ಗುತ್ತಿಗೆಯನ್ನು ವಜಾಗೊಳಿಸಲಾಗಿದೆ ಎಂದು ಅವರು ವಿವರಿಸಿದರು. ಐಆರ್‌ಸಿಟಿಸಿಯಿಂದ ನಿರ್ವಹಿಸಲ್ಪಡುವ 10 ಅತ್ಯಾಧುನಿಕ ಮೂಲ ಪಾಕಶಾಲೆಗಳು,ಈಗಿನ 45 ದೊಡ್ಡ ನಿಲ್ದಾಣಗಳಿಂದ ಎಲ್ಲ ಎ-1 ಮತ್ತು ಎ ವರ್ಗದ ನಿಲ್ದಾಣಗಳಿಗೆ ಇ-ಕೇಟರಿಂಗ್ ಸೇವೆಯ ವಿಸ್ತರಣೆ, ನಿಲ್ದಾಣಗಳಲ್ಲಿ ಬಹುದ್ದೇಶಿತ ಅಂಗಡಿಗಳ ಸ್ಥಾಪನೆ ಇತ್ಯಾದಿಗಳನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದರು.
ಊಟೋಪಚಾರಗಳ ಸೇವೆಯಲ್ಲಿ ಅಪೇಕ್ಷಿತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಥರ್ಡ್ ಪಾರ್ಟಿ ಆಡಿಟ್‌ನ್ನು ಮುಂಗಡಪತ್ರದಲ್ಲಿ ಕಡ್ಡಾಯಗೊಳಿಸಲಾಗಿದೆ. ಊಟೋಪಚಾರ ಮತ್ತು ಇತರ ಕಿರುಘಟಕಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ, ಒಬಿಸಿಗಳು,ಮಹಿಳೆಯರು,ದಿವ್ಯಾಂಗರು ಇತ್ಯಾದಿ ವರ್ಗದವರಿಗೆ ಮೀಸಲಾತಿ ಜಾರಿಗೊಳಿಸುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ತಿಳಿಸಿದರು.





