ಫ್ಲಾಟ್ ಖರೀದಿದಾರರಿಂದ ಹೆಚ್ಚುವರಿ ಹಣ ಸಂಗ್ರಹಿಸಬೇಡಿ
ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು, ಮಾ.16: ಸಹಕಾರ ಸಂಘಗಳ ಅಧೀನದಲ್ಲಿ ನಿರ್ಮಾಣವಾಗುವ ವಸತಿ ಸಮುಚ್ಚಯಗಳಲ್ಲಿ ಫ್ಲಾಟ್ ಖರೀದಿಸಬೇಕಾದಲ್ಲಿ ಆಯಾ ಸಹಕಾರ ಸಂಘದ ಸದಸ್ಯತ್ವ ಪಡೆಯಲು ಶುಲ್ಕದ ರೂಪದಲ್ಲಿ ಹೆಚ್ಚುವರಿ ಹಣ ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೃಷ್ಣಮೂರ್ತಿ ಸುಬ್ರಹ್ಮಣ್ಯ ಎಂಬವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್‌ಸರಣ್ ಮತ್ತು ನ್ಯಾ. ಶ್ರೀನಿವಾಸೇಗೌಡ ಅವರಿದ್ದ ನ್ಯಾಯಪೀಠ, ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಹೊಸದಾಗಿ ಸದಸ್ಯತ್ವ ಪಡೆಯುವುದಕ್ಕೆ ವಿವಿಧ ರೀತಿಯ ಶುಲ್ಕಗಳನ್ನು ಭರಿಸುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ತಿಳಿಸಿದೆ.
ಸಂಘದ ಸದಸ್ಯರಿಂದ ದೇಣಿಗೆ ಸಂಗ್ರಹಿಸುವುದಕ್ಕೆ ನಿರ್ಣಯ ಕೈಗೊಂಡಿದ್ದರೂ, ಆ ಮೊತ್ತವನ್ನು ನೂತನವಾಗಿ ಸದಸ್ಯರಾಗುವವರ ಮೇಲೆ ಹೇರುವುದಕ್ಕೆ ಅವಕಾಶವಿಲ್ಲ. ಸದಸ್ಯತ್ವ ಪಡೆಯುವುದಕ್ಕೆ ಬೃಹತ್ ಪ್ರಮಾಣದ ಶುಲ್ಕ ವಿಧಿಸಲು ಅವಕಾಶವಿಲ್ಲ. ಅಲ್ಲದೆ, ಸಹಕಾರ ಸಂಘಗಳು ಲಾಭರಹಿತ ಸಂಘಗಳಾಗಿದ್ದು, ಫ್ಲಾಟ್ ಖರೀದಿ ಮಾಡುವವರಿಂದ ಹೆಚ್ಚುವರಿ ಶುಲ್ಕ ಪಡೆಯುವುದಕ್ಕೆ ಸಹಕಾರ ಸಂಘಗಳ ಕಾಯ್ದೆಯಲ್ಲಿ ಅವಕಾಶ ನೀಡಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು: ಕೃಷ್ಣಮೂರ್ತಿ ಸುಬ್ರಹ್ಮಣ್ಯ ಎಂಬವರು ‘ದಿ ಸಂಯುಕ್ತ ಭಾರತ ಗೃಹನಿರ್ಮಾಣ ಸಹಕಾರ ಸಂಘ’ದಿಂದ ಫ್ಲಾಟ್ ಖರೀದಿಸಿದ್ದರು. ಖರೀದಿ ವೇಳೆ ಸಂಘದ ಸದಸ್ಯತ್ವ ಪಡೆಯಲು ಹೆಚ್ಚುವರಿ 15 ಸಾವಿರ ರೂ.ಕಡ್ಡಾಯವಾಗಿ ಪಾವತಿಸಲು ಸೂಚಿಸಲಾಗಿತ್ತು. ಈ ಕ್ರಮ ಪ್ರಶ್ನಿಸಿ ಕೃಷ್ಣಮೂರ್ತಿ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ರಿಜಿಸ್ಟ್ರಾರ್ ಹೆಚ್ಚುವರಿ ಶುಲ್ಕ ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಆದೇಶ ಪ್ರಶ್ನಿಸಿ ದಿ ಸಂಯುಕ್ತ ಭಾರತ ಗೃಹನಿರ್ಮಾಣ ಸಹಕಾರ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ವಸತಿ ಸಮುಚ್ಚಯ ನಿರ್ಮಿಸುವ ಸಹಕಾರ ಸಂಘಗಳ ಸದಸ್ಯತ್ವ ಪಡೆಯಲು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕೃಷ್ಣಮೂರ್ತಿ ದ್ವಿಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.







