‘ಎಂ-ಸ್ಯಾಂಡ್’ ತಯಾರಿಕೆಗೆ ಪ್ರೋತ್ಸಾಹ: ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು, ಮಾ.16: ರಾಜ್ಯದಲ್ಲಿ ಮರಳು ಕೊರತೆ ಹೆಚ್ಚಿರುವುದರಿಂದ ಎಂ-ಸ್ಯಾಂಡ್(ಕೃತಕ ಮರಳು) ತಯಾರಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಚಿಂತನೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತಕ ಮರಳು ತಯಾರಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ನಿಯಮಾವಳಿಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದರು.
ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಹಕರಿಗೆ ಮರಳು ಸಿಗಬೇಕು ಎಂಬುದು ನಮ್ಮ ಉದ್ದೇಶ. ಈ ಸಂಬಂಧ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಜಯಚಂದ್ರ ಹೇಳಿದರು.
ಮರಳಿನ ಬೇಡಿಕೆ ಹಾಗೂ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಶೇ.50 ರಿಂದ 60ರಷ್ಟು ಮಾತ್ರ ಮರಳು ಪೂರೈಕೆಯಾಗುತ್ತಿದೆ. ಜಲ್ಲಿ ಲಭ್ಯತೆಯ ಪ್ರಮಾಣವು ಕಡಿಮೆಯಾಗಿದೆ. ಇದರಿಂದಾಗಿ, ಕಾಮಗಾರಿಗಳು ಕುಂಠಿತವಾಗಿ ಸಾಗುತ್ತಿವೆ ಎಂದು ಅವರು ಹೇಳಿದರು.
ಸಿಬಿಐ ಮಾದರಿಯಲ್ಲಿ ಎಸಿಬಿ: ಕೇಂದ್ರ ಸರಕಾರದ ಮಟ್ಟದಲ್ಲಿರುವ ಸಿಬಿಐ ಮಾದರಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕಾರ್ಯನಿರ್ವಹಿಸಲಿದೆ. ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಎರಡು ಪ್ರತ್ಯೇಕವಾದದ್ದು. ಲೋಕಾಯುಕ್ತ ಸಂಸ್ಥೆಯ ಪರಮಾಧಿಕಾರವನ್ನು ಸರಕಾರ ಕಿತ್ತುಕೊಂಡಿಲ್ಲ ಎಂದು ಜಯಚಂದ್ರ ಸ್ಪಷ್ಟನೆ ನೀಡಿದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಎರಡು ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಎಸಿಬಿಗೆ ಎಡಿಜಿಪಿ ಅಧಿಕಾರಿಯನ್ನು ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗುವುದು. ಸುಪ್ರೀಂಕೋರ್ಟ್ , ರಾಜ್ಯ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶ, ನಿರ್ದೇಶನಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಲೋಕಾಯುಕ್ತರಿಗೆ ಅಗತ್ಯ ಸಂದರ್ಭಗಳಲ್ಲಿ ಎಸಿಬಿ ಸಹಾಯವನ್ನು ಪಡೆದುಕೊಳ್ಳಲು ಅಧಿಕಾರವಿದೆ. ಎಸಿಬಿ ರಚನೆಗೆ ಸಂಬಂಧಿಸಿದಂತೆ ಸರಕಾರ ಪ್ರಾಥಮಿಕ ರಾಜ್ಯ ಪತ್ರವನ್ನು ಮಾತ್ರ ಹೊರಡಿಸಿದೆ. ಈ ವಿಶೇಷ ದಳಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಅಧಿಕಾರಗಳನ್ನು ನೀಡಲಾಗುವುದು ಎಂದು ಜಯಚಂದ್ರ ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯು ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಅವರ ಕೆಲಸ ಅಸಮಾಧಾನ ತಂದಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಭ್ರಷ್ಟಾಚಾರ ತಡೆಗೆ ಇನ್ನಷ್ಟು ಬಲ ನೀಡುವ ಉದ್ದೇಶದಿಂದ ಎಸಿಬಿಯನ್ನು ರಚನೆ ಮಾಡಿದ್ದೇವೆ. ಸುಮಾರು 320 ಅಧಿಕಾರಿಗಳು ಈ ವಿಶೇಷ ದಳಕ್ಕೆ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದರು.
ಡಿ.ಕೆ.ರವಿ ಅಸಹಜ ಸಾವು ಪ್ರಕರಣ: ಐಎಎಸ್ ಅಧಿಕಾರಿ ಡಿ.ಕೆ.ರವಿ ಅಸಹಜ ಸಾವಿಗೆ ಸಂಬಂಧಿಸಿದಂತೆ ಒಂದು ವರ್ಷವಾದರೂ ಸಿಬಿಐ ಪ್ರಾಥಮಿಕ ತನಿಖಾ ವರದಿಯನ್ನು ನೀಡಲಿಲ್ಲ. ಜನತೆಯ ಹೋರಾಟಕ್ಕೆ ಸ್ಪಂದಿಸಿ ಸರಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ತನಿಖಾ ವರದಿಗಾಗಿ ನಾವು ಸಿಬಿಐ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಮನವಿಯನ್ನು ಮಾತ್ರ ಮಾಡಲು ಸಾಧ್ಯ ಎಂದು ಜಯಚಂದ್ರ ತಿಳಿಸಿದರು.
ಡಿ.ಕೆ.ರವಿ ಮೃತಪಟ್ಟ ಸಂದರ್ಭದಲ್ಲಿ ಸರಕಾರ ಪ್ರಕಟಿಸಿದ್ದ ಪರಿಹಾರವನ್ನು ಅವರ ಉತ್ತರಾಧಿಕಾರಿ(ಪತ್ನಿ)ಗೆ ವರ್ಗಾಯಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಭರವಸೆಗಳನ್ನು ಸರಕಾರ ಮಾಡಿರಲಿಲ್ಲ. ಅವರ ಕುಟುಂಬ ಸದಸ್ಯರು ಸರಕಾರದ ಮುಂದೆ ಯಾವುದೇ ಬೇಡಿಕೆಗಳನ್ನು ಇಟ್ಟಿರಲಿಲ್ಲ ಎಂದು ಅವರು ಹೇಳಿದರು.
ಇಂತಹ ಸಂದರ್ಭದಲ್ಲಿ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಮುಂದೆ ಬಂದು ಮಾನವೀಯತೆ ದೃಷ್ಟಿಯಿಂದ ಡಿ.ಕೆ.ರವಿ ಕುಟುಂಬಕ್ಕೆ ನೆರವು ನೀಡಬೇಕು ಎಂದು ಜಯಚಂದ್ರ ಮನವಿ ಮಾಡಿದರು.





