ನ್ಯಾ.ಎಸ್.ಆರ್.ನಾಯಕ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಮಾ.16: ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್.ಜಗನ್ನಾಥ್ ಎಂಬವರು ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಎಸ್.ಆರ್.ನಾಯಕ್ ಅವರ ಪತ್ನಿ ಶಾಲಿನಿ ಎಸ್.ನಾಯಕ್ ಸರ್ಜಾಪುರ ರಸ್ತೆಯಲ್ಲಿರುವ ಅಗರದಲ್ಲಿ 40/60 ವಿಸ್ತೀರ್ಣದ ಒಂದು ನಿವೇಶನವನ್ನು 1990ರಲ್ಲಿ ಖರೀದಿಸಿದ್ದಾರೆ. ಅಲ್ಲದೆ, 2001ರಲ್ಲಿ ಆರ್‌ಎಂವಿ ಬಡಾವಣೆ ಎರಡನೆ ಹಂತದಲ್ಲಿ 50/80 ವಿಸ್ತೀರ್ಣದ ನಿವೇಶನವನ್ನು ಖರೀದಿಸಿದ್ದಾರೆ ಎಂದು ಜಗನ್ನಾಥ್ ಆರೋಪಿಸಿದ್ದಾರೆ.
ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 859‘ಸಿ’ಯನ್ನು 2002ರಲ್ಲಿ ಎಸ್.ಆರ್.ನಾಯಕ್ ಖರೀದಿ ಮಾಡಿದ್ದಾರೆ. ಈ ಬಡಾವಣೆಯಲ್ಲಿ ನಿವೇಶನ ಖರೀದಿಸುವವರ ಕುಟುಂಬ ಸದಸ್ಯರು(ಗಂಡ-ಹೆಂಡತಿ) ಬೇರೆ ಎಲ್ಲಿಯೂ ನಿವೇಶನ, ಮನೆಯನ್ನು ಹೊಂದಿರಬಾರದು ಎಂದು ಬಡಾವಣೆಯನ್ನು ನಿರ್ಮಿಸಿರುವ ಸಂಘದ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿದೆ.
ಆದರೆ, ಎಸ್.ಆರ್.ನಾಯಕ್ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸುವುದಕ್ಕಿಂತ ಮುಂಚಿತವಾಗಿ ಅವರ ಪತ್ನಿ ಎರಡು ನಿವೇಶನಗಳನ್ನು ಹೊಂದಿದ್ದಾರೆ. ಈ ಸತ್ಯಾಂಶವನ್ನು ಮುಚ್ಚಿಟ್ಟು ಸಂಘದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜಗನ್ನಾಥ್ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಇದೀಗ ರಾಜ್ಯ ನ್ಯಾಯಾಂಗ ಆಯೋಗದ ಅಧ್ಯಕ್ಷರಾಗಿರುವ ಎಸ್.ಆರ್.ನಾಯಕ್‌ರನ್ನು ರಾಜ್ಯ ಸರಕಾರ ಲೋಕಾಯುಕ್ತಕ್ಕೆ ನೇಮಕ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಅವರು ದೂರಿದ್ದಾರೆ.





